

ಮಹನೀಯರ ಮಾತುಗಳಲ್ಲಿ ಮಹನೀಯರು ಕೃತಿ ಲೋಕಾರ್ಪಣೆ
ಬೆಂಗಳೂರು: ಹಿರಿಯ ವಿದ್ವಾಂಸ ಡಾ.ರಂಗನಾಥ್ ಅವರು ಸಾಹಿತ್ಯಲೋಕಕ್ಕೆ ಈಗಾಗಲೇ ನೀಡಿರುವ ಕೊಡುಗೆಗೆ ಪ್ರಸ್ತುತ ‘ಮಹನೀಯರ ಮಾತುಗಳಲ್ಲಿ ಮಹನೀಯರು’ ಈ ಗ್ರಂಥವು ಒಂದು ಅಸದೃಶ ಸೇರ್ಪಡೆಯಾಗಿದ್ದು, 200 ಮಹನೀಯರ ಬಗ್ಗೆ ಬರೆಯಲು ತಾಳ್ಮೆ ಅಗತ್ಯ ಎಂದು ಬಹುಶ್ರುತ ಕವಿ ವಿದ್ವಾಂಸ ಶತಾವಧಾನಿ ಡಾ. ರಾ ಗಣೇಶ ತಿಳಿಸಿದರು .
ಬೆಂಗಳೂರಿನ ಬಸವನಗುಡಿಯ ಎನ್.ಆರ್.ಕಾಲೊನಿಯಲ್ಲಿ ಭಾನುವಾರ ಸ್ನೇಹ ಪ್ರಿಂಟಸ್‌ರ್ ಮತ್ತು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಧೆಯ ಆಶ್ರಯದಲ್ಲಿ ಗೋಖಲೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ .ಎಸ್ ರಂಗನಾಥ್ ಅವರ ‘ಮಹನೀಯರ ಮಾತುಗಳಲ್ಲಿ ಮಹನೀಯರು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಂಗನಾಥ್ ಅವರ ಅಧ್ಯಯನ ಶ್ರೀಮಂತಿಕೆಯಷ್ಟೇ ಅವರ ಜನಾಭಿಮುಖ ಸ್ವಭಾವವೂ ವಿಶಿಷ್ಟವಾಗಿದೆ. ಈ ಕಾರಣದಿಂದಲೂ ಡಾ ರಂಗನಾಥ್ ಅವರು ನಮ್ಮಸಮಾಜಕ್ಕೆ ಒಂದು ದೊಡ್ಡ ನಿಧಿಯಾಗಿದ್ದಾರೆ ಎಂದು ಶತಾವಧಾನಿ ಡಾ .ರಾ ಗಣೇಶ ಅಭಿಪ್ರಾಯಪಟ್ಟರು.18 ಲೇಖಕಿಯರು ಸೇರಿ 200 ಜನ ಸಾಹಿತಿಗಳು 1854 ರಿಂದ 1962ರ ವರೆಗಿನ ಹನ್ನೊಂದು ದಶಕಗಳ ಅವಧಿಯಲ್ಲಿ ಜನಿಸಿದವರು, ಸುಮಾರು ಇಪ್ಪತ್ತು ಮಂದಿ ಈಚೀಚೆಗೆ ನಿಧನರಾದವರು: ಸುಮಾರು ನಲವತ್ತು ಮಂದಿ ಈಗಲೂ ಸುದೈವದಿಂದ ನಮ್ಮೊಡನೆ ಇದ್ದು ಸಾಹಿತ್ಯಾರಾಧನೆಯಲ್ಲಿ ತೊಡಗಿರುವವರು. ಹೀಗೆ ಆಧುನಿಕ ಕನ್ನಡ ಸಾಹಿತ್ಯ ನಿರ್ಮಾಪಕರಲ್ಲಿ ಪ್ರಮುಖರನ್ನು ಕುರಿತ ಒಂದು ಪ್ರಾತಿನಿಧಿಕ ಕೋಶವೆಂದು ಈ ಗ್ರಂಥವನ್ನು ಪರಿಗಣಿಸಬಹುದು. ಈ ಸಂಕಲನದ ಕಲ್ಪನೆಯೇ ವಿನೂತನವೂ, ಜಟಿಲವೂ ಆಗಿದೆ. ಡಾ.ಎಸ್. ರಂಗನಾಥ್ ಅವರು ರಚಿಸಿರುವ ಹತ್ತಾರು ಗ್ರಂಥಗಳ ಮೌಲಿಕತೆಯೂ ಜನಜನಿತವಾಗಿವೆ. ಮಹಿಳಾ ಲೇಖಕಿ ತಿರುಮಲಾಂಬ ನಂಜನಗೂಡು , ಬ್ರಹ್ಮರ್ಷಿ ದೇವತಾ ಅವರ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲ ಹಾಗಾಗಿ ಅವರ ಬಗ್ಗೆಯೂ ತಿಳಿಸಿರುವುದು ಒಳ್ಳೆಯದು. ಗೋವಿಂದ ಪೈ , ಗೋಕಾಕ್ , ಪು .ತಿ .ನ . ಮಾಸ್ತಿ ಇವರ ವಿಷಯಗಳನ್ನ ಅಗೆದು ತೆಗೆದು ಕೊಟ್ಟಿದ್ದಾರೆ. ಉತ್ತರ ಕರ್ನಾಟಕ, ಕರಾವಳಿ , ಮಲೆನಾಡು ಇನ್ನಿತರ ಭಾಗದ ಮಹನೀಯರ ಪರಿಚಯ , ನೆಲ, ಜಲ, ಭಾಷೆಯ ಬಗ್ಗೆಯ ಪರಿಚಯವು ಕೃತಿಯಲ್ಲಿ ಅದ್ಭುತವಾಗಿ ದಾಖಲಾಗಿದೆ.
ಸಂಶೋಧಕರಾಗಿ, ಲೇಖಕರಾಗಿ, ಬೋಧಕರಾಗಿ, ಸಂಘಟಕರಾಗಿ ಮಾತ್ರವಲ್ಲದೆ ಪ್ರವಚನಕಾರರಾಗಿಯೂ ಡಾ.ರಂಗನಾಥ್ ಅವರು ಹೆಸರು ಗಳಿಸಿದ್ದಾರೆ. ಸಂಸ್ಕೃತ, ಸಾಹಿತ್ಯ, ಬಗೆಗಾಗಲಿ ದಾರ್ಶನಿಕ-ಧಾರ್ಮಿಕ ವಿಷಯದ ಬಗೆಗಾಗಲಿ, ಅಧಿಕಾರವಾಣಿಯಿಂದಲೂ ಸಮರ್ಥವಾಗಿಯೂ ರೋಚಕವಾಗಿಯೂ ಇವರ ಪ್ರವಚನಗಳು ವಿಶಾಲ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಶತವಧಾನಿ ಡಾ.ರಾ.ಗಣೇಶ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ಡಾ ಟಿ .ವಿ .ವೆಂಕಾಟಾಚಲ ಶಾಸ್ತ್ರಿ ವಹಿಸಿದ್ದರು.ಕೃತಿ ಯನ್ನು ನಾಡೋಜ ಎಸ್.ಅರ್ ರಾಮಸ್ವಾಮಿ ಲೋಕಾರ್ಪಣೆಗೊಳಿಸಿದರು.ವಿದ್ವಾಂಸ ಡಾ .ಎಸ್ ರಂಗನಾಥ ಉಪಸ್ಥಿತರಿದ್ದರು.