

ಮೈಸೂರು: ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ನೀತಿವಂತರಾಗಿ ರೂಪಿಸಬೇಕು ಎಂದು ಕೇಂದ್ರ ದೂರಸಂಪರ್ಕ ಇಲಾಖೆಯ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ. ಗೋಪಿನಾಥ್ ಹೇಳಿದರು.
ಕಲಾಸುರುಚಿ ವತಿಯಿಂದ ನಟನರಂಗ ಶಾಲೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಡಾ.ಎಚ್.ಕೆ. ರಾಮನಾಥ ಸ್ಮರಣೆ ಮತ್ತು ಕಥೆ ಕೇಳೋಣ ಬನ್ನಿ-750 ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಿನ ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರವನ್ನು ಕೊಡಬೇಕು. ನೈತಿಕತೆ ಮತ್ತು ನೀತಿ ಪಾಠ ಅವರನ್ನು ಉತ್ತಮ ಮನುಷ್ಯರಾಗಿ ಮಾಡುತ್ತದೆ. ಮಹಾಭಾರತ, ರಾಮಾಯಣದಲ್ಲಿರುವ ಮೌಲ್ಯ, ಸಂಸ್ಕಾರವನ್ನು ಕಥೆ ಮೂಲಕ ಸರಳವಾಗಿ ತಿಳಿಸಿಕೊಡಬೇಕು ಎಂದರು
ಆಡಳಿತ ವ್ಯವಸ್ಥೆಯಲ್ಲಿ ಈಗ ಎಲ್ಲೆಡೆ ರಾಜಕಾರಣಿಗಳ ಹಸ್ತಕ್ಷೇಪ ಅಧಿಕವಾಗಿದೆ. ವರ್ಗಾವಣೆ ಶಿಕ್ಷೆ ಕುರಿತು ಅಧಿಕಾರಿಗಳಲ್ಲಿ ಆತಂಕವೂ ನೆಲೆವೂರಿದೆ. ನಾನು ಕೂಡ ಈ ಶಿಕ್ಷೆಗೆ ಒಳಗಾಗಿರುವೆ. ಆದರೆ, ಇದಕ್ಕೆಲ್ಲ ಅಂಜಲಿಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಯಾವುದಕ್ಕೂ ಹೆದರುವ ಅಗತ್ಯ ಇರುವುದಿಲ್ಲ ಎಂದರು.
ರಂಗಭೂಮಿ ಚಲನಚಿತ್ರ ಕಲಾವಿದ ಮಂಡ್ಯ ರಮೇಶ್ ಮಾತನಾಡಿ, ಡಾ.ಎಚ್.ಕೆ.ರಾಮನಾಥ್ ಹೆಸರು ಕೇಳಿದರೆ ಸಾಕು ಆತ್ಮಭಾವ ಮತ್ತು ಸಂತೋಷ ನಗೆ ಉಕ್ಕುತ್ತದೆ. ಗಾಂಧಿ, ಬುದ್ಧ ಹೆಸರು ಕೇಳಿದರೆ ಹೇಗೆ ಒಂದು ರೀತಿ ಆನಂದವಾಗುತ್ತದೆಯೋ ಅದೇ ರೀತಿ ರಾಮನಾಥ್ ಹೆಸರು ಕೇಳಿದಾಗಲೂ ರಂಗಭೂಮಿ ಜನರಲ್ಲಿ ಸಂತೋಷಭಾವ ಮೂಡುತ್ತದೆ. ಅವರಲ್ಲಿ ರಂಗಭೂಮಿ ಉತ್ಸಾಸ, ಜೀವಮುಖಿ ಮತ್ತು ಜೀವಸಂತೋಷ ಎದ್ದುಕಾಣುತ್ತಿತ್ತು ಎಂದು ಸ್ಮರಿಸಿದರು.
ಡಾ.ಎಚ್.ಕೆ.ರಾಮನಾಥರ ಕುರಿತಾದ ಸಾಕ್ಷೃಚಿತ್ರ, ಅವರು ರಚಿಸಿದ ಎರಡು ಮಕ್ಕಳು ನಾಟಕ ಕೂಡ ಪ್ರದರ್ಶನ ಜರುಗಿತು. ಪ್ರಾದೇಶಿಕ ಆಯುಕ್ತ ಕಚೇರಿಯ ಹೆಚ್ಚುವರಿ ಆಯುಕ್ತ ಶಿವರಾಜು, ರಾಜೇಶ್ವರಿ ವಸ್ತ್ರಾಲಂಕಾರದ ಬಿ.ಎಂ.ರಾಮಚಂದ್ರ, ನಟನ ರಂಗಶಾಲೆಯ ಅಧ್ಯಕ್ಷ ಕೆ.ಎಸ್.ಆನಂದಬಾಬು ಇನ್ನಿತರರು ಇದ್ದರು.