

ಚನ್ನರಾಯಪಟ್ಟಣ: ಉತ್ತಮ ಜೀವನಕ್ಕಾಗಿ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯವನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಸಲಹೆ ನೀಡಿದರು.
ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ 91ನೇ ಬೃಹತ್ ದನಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಬಿಜಿಎಸ್ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈದ್ಯ, ಇಂಜಿನಿಯರ್ ಹಾಗೂ ಇನ್ನಿತರ ಉನ್ನತ ಹುದ್ದೆಗಳನ್ನು ಬಯಸುವ ಬದಲು ಪಾಲಕರು ತಮ್ಮ ಮಕ್ಕಳ ಉತ್ತಮ ಭವಿಷ್ಯದ ಬಗ್ಗೆ ಚಿಂತನೆ ಮಾಡುವುದು ಅಗತ್ಯ. ಸಂಸ್ಕಾರ ಕಲಿಯದೆ, ಶಿಕ್ಷಣ ಮಾತ್ರ ಪಡೆದರೆ ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.
ತಂದೆ-ತಾಯಿ ಹಾಗೂ ಗುರು-ಹಿರಿಯರಿಗೆ ಗೌರವ ಕೊಡಬೇಕು. ಇಲ್ಲದಿದ್ದಲ್ಲಿ ಕಲಿತ ವಿದ್ಯೆಯೂ ವ್ಯರ್ಥವಾಗಲಿದೆ. ಶಿಕ್ಷಣ ಕಲಿತರಷ್ಟೇ ಪ್ರಪಂಚಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಿಲ್ಲ, ಅಪಾರ ಜ್ಞಾನ ಸಂಪಾದನೆ ಬಹಳ ಮುಖ್ಯ ಎಂದರು.
ಶಿಕ್ಷಣದ ಜತೆಗೆ ಸಾಮಾನ್ಯ ಜ್ಞ್ಞಾನ ಮುಖ್ಯ. ಗ್ರಾಮೀಣ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಸಿಗಬೇಕಿದೆ. ಗರ್ಭದೊಳಗೆ ಇರುವಾಗಲೇ ತಾಯಿ ತನ್ನ ಮಗುವಿಗೆ ಜಗತ್ತಿನಲ್ಲಿ ಬದುಕಲು ಅಗತ್ಯವಿರುವಷ್ಟು ಜ್ಞಾನದ ಬೆಳಕನ್ನು ತುಂಬಿರುತ್ತಾಳೆ. ಆ ಜ್ಞಾನದ ಬೆಳಕು ಬದುಕಿನ ದಾರಿದೀಪವಾಗಲಿದೆ ಎಂದು ತಿಳಿಸಿದರು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಜನ್ಮ ಪಡೆದು ಬರುವ ಯಾರೊಬ್ಬರೂ ಈ ಜಗತ್ತಿನಲ್ಲಿ ಶಾಶ್ವತವಾಗಿ ನಿಲ್ಲಲಾರರು. ಆದರೂ ಹಣ-ಆಸ್ತಿ ಗಳಿಕೆಯ ಜತೆ ಮತ್ತೇನೋ ಪಡೆವ ಆಸೆ, ಸ್ವಾರ್ಥಕ್ಕಾಗಿ ಬೇರೇನೋ ಸೃಷ್ಟಿಸುವ ಹಂಬಲ, ಅಷ್ಟರಲ್ಲಿ ಸಮಯ ಸಮೀಪಿಸಿ ಯಾವುದೋ ಒಂದು ನೆಪದಲ್ಲಿ ಸರಿದು ಕಣ್ಮರೆಯಾಗುವುದೇ ನೆನಪುಳಿಯುವ ಬದುಕಲ್ಲ ಎಂದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಜ್ಞಾನ ಸಂಪತ್ತು ಸಿಕ್ಕಿದರೂ ಎಲ್ಲವನ್ನೂ ಸಾಧಿಸಲಾಗುವುದಿಲ್ಲ. ಯಾಕೆಂದರೆ, ಮನೆಯಲ್ಲಿ ಪಾಲಕರ ನಡೆ-ನುಡಿ ಹಾಗೂ ಮೌಲ್ಯಯುತವಾದ ದೈನಂದಿಕ ಜೀವನ ಮಕ್ಕಳ ಬದುಕಿಗೆ ದಾರಿದೀಪವಾಗಲಿದೆ. ಇಲ್ಲಿ ಅಗತ್ಯ ಶಿಕ್ಷಣದ ಜತೆಗೆ, ಸನ್ಮಾರ್ಗದಲ್ಲಿ ನಡೆದರೆ ಮಾತ್ರ ಸಾಧನೆ ನಮ್ಮ ಸ್ವತ್ತಾಗಲು ಸಾಧ್ಯ ಎಂದು ಆಶೀರ್ವಚನ ನೀಡಿದರು.
ಬಳಿಕ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಕ್ಷೇತ್ರ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್, ಕಸಾಪ ಜಿಲ್ಲಾ ಕಾರ್ಯದರ್ಶಿ ಬೊಮ್ಮೇಗೌಡ, ಶಾಲಾ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ, ಶಿಕ್ಷಕವೃಂದ ಹಾಗೂ ಪಾಲಕರು ಪಾಲ್ಗೊಂಡಿದ್ದರು.