ವಿದ್ಯೆಯನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ

4blrp5
Published on

ಬೇಲೂರು: ವಿದ್ಯಾರ್ಥಿಗಳು ತಮ್ಮದೇ ಆದ ಗುರಿಯೊಂದಿಗೆ, ಗುರು-ಹಿರಿಯರ ಆಶೀರ್ವಾದ ಪಡೆದು ಮುನ್ನಡೆದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದನ್ನು ಅರಿತು ಉತ್ತಮ ವಿದ್ಯಾಭ್ಯಾಸಕ್ಕೆ ಮುಂದಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಸಲಹೆ ನೀಡಿದರು.


ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕಲಾ ಸಂಘ, ರಾಷ್ಟ್ರೀಯ ಸೇವಾ ಯೋಜನ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ರಾಜ್ಯದಲ್ಲಿ ದ್ವಿತೀಯ ಪಿಯು ಫಲಿತಾಂಶದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕಾಲೇಜು ಈ ಬಾರಿ ಪ್ರಥಮ ಸ್ಥಾನಕ್ಕೇರಬೇಕು. ನಿಮ್ಮ ಆಸ್ತಿಯನ್ನು ಯಾರೂ ಬೇಕಾದರೂ ಕಿತ್ತುಕೊಳ್ಳಬಹುದು. ಆದರೆ ವಿದ್ಯೆಯನ್ನು ಯಾರಿಂದಲೂ ಕೀಳಲು ಸಾಧ್ಯವಿಲ್ಲ. ಕಾಲೇಜಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಾವು ಮಾತಿನಲ್ಲಿ ಮನೆ ಕಟ್ಟದೆ, ಏನು ಮಾಡಬೇಕೆಂಬುದನ್ನು ಅರಿತು ಕೆಲಸ ಮಾಡಲಿದ್ದೇನೆ. ಯಾವುದೇ ಖಾಸಗಿ ಕಾಲೇಜಿಗೂ ಕಮ್ಮಿ ಇಲ್ಲದಂತೆ ಈ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.


ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಬೆಳೆಯುವ ಪೈರು ಮೊಳಕೆಯಲ್ಲೇ ಎಂಬಂತೆ ಪದವಿ ಪೂರ್ವ ಶಿಕ್ಷಣ *ವಿದ್ಯರ್ಥಿಗಳ ಜೀವನದಲ್ಲಿ ಮಹತ್ತರವಾಗಿದೆ. ಆದ್ದರಿಂದ *ವಿದ್ಯರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಮುಂದಾಗಬೇಕು. ಪರಿಸರ ಸಂರಕ್ಷಣೆಯಂತಹ ಕಾರ್ಯದಲ್ಲಿ ತೊಡಗಬೇಕು. ಕಾಲೇಜಿನ ಎಲ್ಲ ಚಟುವಟಿಕೆಯಲ್ಲೂ ಭಾಗವಹಿಸಿ ದೇಶದ ಶ್ರೇಷ್ಠ ಪ್ರಜೆಯಾಗಬೇಕು. ಕಾಲೇಜಿನ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಮತ್ತು ಇಲ್ಲಿನ ಗುಡಿಸಲು ವಾಸಿಗಳನ್ನು ಬೇರೆಡೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.


ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹರೀಶ್, ಉಪನ್ಯಾಸಕರಾದ ಲಕ್ಷ್ಮೀನಾರಾಯಣ್, ಸರ್ವಮಂಗಳಾ, ನಿವೃತ್ತ ಉಪನ್ಯಾಸಕ ಲೋಕೇಗೌಡ, ರೈತ ಸಂಘದ ಮುಖಂಡ ಸ್ವಾಮಿಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net