

ಕಾರ್ಗಲ್: ಪಾಕಿಸ್ತಾನದ ವಿರುದ್ಧ ಸಮರ ಸಾರಿರುವ ಭಾರತಕ್ಕೆ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಶರಾವತಿ ಯೋಜನಾ ಪ್ರದೇಶದ ಲಿಂಗನಮಕ್ಕಿ ಜಲಾಶಯ ಸೇರಿದಂತೆ ಶರಾವತಿ ಕಣಿವೆಯ ಸ್ಥಾವರಗಳ ಸುರಕ್ಷತೆ ದೃಷ್ಟಿಯಿಂದ ಸೂಕ್ತ ನಿಗಾ, ಕಟ್ಟೆಚ್ಚರ ಹಾಗೂ ಭದ್ರತೆಯನ್ನು ಇನ್ನಷ್ಟು ಹೆಚ್ಚು ಮಾಡುವ ನಿಟ್ಟಿನಲ್ಲಿ ಜೋಗದ ಕೆಪಿಸಿ ಕಾನ್ಫರೆನ್ಸ್ ಹಾಲ್‌ನಲ್ಲಿ ಉನ್ನತ ಮಟ್ಟದ ತುರ್ತು ಸಭೆ ಕರೆದು ಚರ್ಚಿಸಲಾಯಿತು.
ತಳಕಳಲೆ ಅಣೆಕಟ್ಟು, ಎಂಜಿಎಚ್‌ಇ, ಶರಾವತಿ ವಿದ್ಯುದಾಗಾರ, ಲಿಂಗನಮಕ್ಕಿ ವಿದ್ಯುದಾಗಾರ ಸೇರಿದಂತೆ ದೇಶದ ಅತ್ಯಮೂಲ್ಯ ಆಸ್ತಿ ಹೊಂದಿರುವ ಶರಾವತಿ ಕಣಿವೆಯ ಸ್ಥಾವರಗಳ ಸುರಕ್ಷತೆ ಬಗ್ಗೆ ಚರ್ಚಿಸಲಾಯಿತು.
ಶುಕ್ರವಾರ ಕೆಪಿಸಿ ಶರಾವತಿ ಯೋಜನಾ ಪ್ರದೇಶದ ಭದ್ರತಾ ವಿಭಾಗದ ಮುಖ್ಯಸ್ಥ ಮುಖ್ಯ ಇಂಜಿನಿಯರ್ ಎಚ್.ಆರ್.ರಮೇಶ್ ಅಧ್ಯಕ್ಷತೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿ, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಮುಖ್ಯಸ್ಥರು ಹಾಗೂ ನಿಗಮದ ವಿವಿಧ ವಿಭಾಗ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು.
ಶರಾವತಿ ಕಣಿವೆಯ ಸ್ಥಾವರಗಳಿಗೆ ವಿಶೇಷವಾಗಿ ಭದ್ರತೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೊ ತರಬೇತಿ ಪಡೆದ ಅನುಭವಿ ಸಿಬ್ಬಂದಿ ಭದ್ರತಾ ಪಡೆಯ ಕಾವಲಿದ್ದು ಎಲ್ಲ ಭದ್ರತಾ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿಯೇ ಇದ್ದು ಭದ್ರತೆಯನ್ನು ಇನ್ನಷ್ಟು ಬಲಬಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರಮುಖವಾಗಿ ಭದ್ರತಾ ದೃಷ್ಟಿಯಿಂದ ಶರಾವತಿ ಯೋಜನಾ ಪ್ರದೇಶದ ಅಣೆಕಟ್ಟುಗಳು ಹಾಗೂ ವಿದ್ಯುದಾಗಾರಗಳ ವೀಕ್ಷಣೆಗಾಗಿ ಸಂದರ್ಶಕರಿಗೆ ನೀಡಲಾಗುತ್ತಿರುವ ಪಾಸ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಕೆಪಿಸಿ ನಿಗಮದ ಉದ್ಯೋಗಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆ ಕಾರ್ಮಿಕರನ್ನು ಹೊರತುಪಡಿಸಿ ಸದ್ಯಕ್ಕೆ ಸಂದರ್ಶಕರ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಸ್ವಂತ ವಾಹನದಲ್ಲಿ ತೆರಳುವ ನಿಗಮದ ಕಾರ್ಮಿಕರಿಗೂ ಇಲಾಖಾ ವಾಹನದಲ್ಲಿಯೇ ಓಡಾಡುವಂತೆ ಸೂಚಿಸಿದ್ದು ಭದ್ರತೆ ದೃಷ್ಟಿಯಿಂದ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶ ನೀಡದಿರುವಂತೆ ನಿರ್ಧರಿಸಲಾಯಿತು.
ಅತ್ಯಂತ ಅಗತ್ಯವಾದ ಸಂದರ್ಭಗಳಲ್ಲಿ ಉದ್ಯೋಗಿಗಳ ಸುರಕ್ಷತೆ ಹಾಗೂ ಸ್ಥಾವರಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸ್ಥಾವರಗಳಲ್ಲಿ ಅಳವಡಿಸಲಾದ ಸುರಕ್ಷತೆಯ ಸೈರನ್‌ಗಳನ್ನು ಪ್ರಾಯೋಗಿಕವಾಗಿ ಸಿದ್ಧ ಮಾಡಿಕೊಳ್ಳುವಂತೆ ತಿಳಿಸಲಾಗಿದ್ದು ಶರಾವತಿ ಕಣಿವೆ ಪ್ರದೇಶಗಳಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಯ 112ಗೆ ತಿಳಿಸುವಂತೆ ಸೂಚಿಸಲಾಯಿತು.
ಪ್ರಸ್ತುತ ಸಾರ್ವಜನಿಕರು ಅನಾವಶ್ಯಕವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಸಂದೇಶಗಳನ್ನು ಹಾಕುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಆ ಮೂಲಕ ಕೆಲವೊಂದು ಮಾಹಿತಿಗಳು ಸೋರಿಕೆ ಆಗದಂತೆ ಸೈಬರ್ ಸುರಕ್ಷತೆಗೆ ಹೆಚ್ಚಿನ ನಿಗಾ ಹಿಸಬೇಕು ಎಂದು ಸಭೆಯಲ್ಲಿ ಕಾರ್ಗಲ್ ಪಿಎಸ್‌ಐ ಹೊಳೆಬಸಪ್ಪ ಹೊಳಿ ತಿಳಿಸಿದರು.
ಇಲ್ಲಿನ ಪ್ರದೇಶದಲ್ಲಿ ಡ್ರೋಣ್ ಅಥವಾ ಅನುಮಾನಸ್ಪದ ವಸ್ತುಗಳು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಕೂಡಲೇ ಇಲಾಖೆಗೆ ತಿಳಿಸಬೇಕೆಂದರು.