ತಿಪಟೂರು: ತಾಲೂಕಿನ ಕಲ್ಲಯ್ಯನಪಾಳ್ಯದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ವಿದ್ಯುತ್ ಅವಡದಲ್ಲಿ ರೈತ ಮತ್ತು 2 ಸೀಮೆಹಸುಗಳು ಮೃತಪಟ್ಟಿವೆ. ಕಲ್ಲಯ್ಯಯಪಾಳ್ಯದ ಚಿಕ್ಕಕೊಟ್ಟಿಗೆಹಳ್ಳಿ ನಿವಾಸಿ ಯೋಗೇಶ್(55) ಮೃತ. ಮಂಗಳವಾರ ಬೆಳಗ್ಗೆ ಸೀಮೆಹಸುಗಳನ್ನು ತೋಟಕ್ಕೆ ಹೊಡೆದುಕೊಂಡು ಹೋಗುವ ಸಂದರ್ಭ ಸೋಮವಾರ ರಾತ್ರಿ ಮಳೆ, ಗಾಳಿ ಪರಿಣಾಮ ಧರೆಗುರುಳಿದ್ದ ವಿದ್ಯುತ್ ತಂತಿಯನ್ನು (ಎಲ್ಟಿಲೈನ್) ಗಮನಿಸದೆ ಹಸುಗಳ ಜತೆಗೆ ಯೋಗೇಶ್ ಸಹ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರಿ ವೇದಾವತಿ ಮತ್ತು ಪುತ್ರ ತ್ಯಾಗರಾಜು ಇದ್ದಾರೆ. ಗ್ರಾಮಾಂತರ ಠಾಣೆಯ ಎಸ್ಐ ನಾಗರಾಜು, ಬೆಸ್ಕಾಂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮನೋಹರ್ ಸ್ಥಳ ಪರಿಶೀಲಿಸಿದ್ದಾರೆ. ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.