ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು

Published on

ಅರಸೀಕೆರೆ: ತಾಲೂಕಿನ ಬೆಳಗುಂಬ ಗೇಟ್ ಬಳಿ ಚತುಷ್ಪಥ ಹೆದ್ದಾರಿ ವಿಭಜಕದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬ ಮುಟ್ಟಿದ ವ್ಯಕ್ತಿಗೆ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಹುಣಸೆಘಟ್ಟ ಗ್ರಾಮದ ರವೀಶ್ (50) ಮೃತರು. ಗುರುವಾರ ರಾತ್ರಿ ಸ್ವಗ್ರಾಮಕ್ಕೆ ತೆರಳುವ ವೇಳೆ ರಸ್ತೆ ದಾಟುವಾಗ ವಿದ್ಯುತ್ ಕಂಬ ಮುಟ್ಟಿದ್ದರಿಂದ ಅವಘಡ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಆದಿಹಳ್ಳಿ, ಬೆಳಗುಂಬ, ತಿಪ್ಪನಹಳ್ಳಿ, ಹುಣಸೆಘಟ್ಟ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.


ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕನ ಜೀವ ಹೋಗಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ದೂರದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಗ್ರಾಮಾಂತರ ಠಾಣೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.


ಶಾಸಕ ಕೆ.ಎಂ.ಶಿವಲಿಂಗೇಗೌಡ, ಬೆಳಗುಂಬ ಗ್ರಾಪಂ ಅಧ್ಯಕ್ಷ ತೋಂಟಾರಾಧ್ಯ, ಮಾಜಿ ಅಧ್ಯಕ್ಷ ಬಾಬು, ವೇದಮೂರ್ತಿ, ಜಯಣ್ಣ, ಸತೀಶ್, ದಯಾನಂದ್ ಇನ್ನಿತರರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದ್ದಾರೆ.
ಮೃತ ರವೀಶ್‌ಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದು ನಗರದ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು. ಹುಣಸೆಘಟ್ಟ ಗ್ರಾಮದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net