ವಿದ್ಯುತ್ ಸೌಲಭ್ಯದಿಂದ ರೈತರಿಗೆ ಬಲ

29 TTH 02
ಮಂಡಗದ್ದೆಯಲ್ಲಿ ನಿರ್ಮಿಸಿರುವ ನೂತನ ವಿದ್ಯುತ್ ಉಪ ಕೇಂದ್ರವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಆರಗ ಜ್ಞಾನೇಂದ್ರ, ಸಿಂಧುವಾಡಿ ಸತೀಶ್, ಸುನೀತಾ ನಾಯ್ಕ, ಶರತ್ ಕಾವೇರಿ ಇತರರಿದ್ದರು.
Published on

ತೀರ್ಥಹಳ್ಳಿ: ಕಳೆದ ವರ್ಷ ಶಿವಮೊಗ್ಗದ ಎಪಿಎಂಸಿ ಸಮುಚ್ಚಯ 150 ಕೋಟಿಗೂ ಅಧಿಕ ಜಿಎಸ್‌ಟಿ ಪಾವತಿಸಿದೆ. ಇದು ರೈತರು ಮತ್ತು ರೈತ ಉತ್ಪನ್ನಗಳ ಮಾರಾಟದ ಪ್ರಾಬಲ್ಯ ಎತ್ತಿ ಹಿಡಿಯುತ್ತದೆ. ರೈತರಿಗೆ ನಿಯಮಿತವಾದ ವಿದ್ಯುತ್ ಸಿಕ್ಕರೆ ಭಾರತದ ಆರ್ಥಿಕತೆ ಮೇಲೆರಲು ಸಹಕಾರಿ ಎಂದು ಸಚಿವ ಎಸ್.ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಮಂಡಗದ್ದೆ ಗ್ರಾಮದಲ್ಲಿ ನೂತನ 110/11 ಕೆವಿ ವಿದ್ಯುತ್ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಶರಾವತಿ ಜಲವಿದ್ಯುತ್ ಯೋಜನೆಯಿಂದ ರಾಜ್ಯಕ್ಕೆ ಉತ್ತಮ ವಿದ್ಯುತ್ ಸೌಲಭ್ಯ ಸಿಗುತ್ತಿದೆ. ಭೂಮಿ ಕಳೆದುಕೊಂಡ ಸಂತ್ರಸ್ತರು ವಾಸಿಸುವ ಪ್ರದೇಶ ಯಾವುದೇ ಕಾರಣಕ್ಕೂ ಕತ್ತಲಿನಲ್ಲಿ ಇರಬಾರದು. ಶಿವಮೊಗ್ಗದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇದ್ದರೆ, ಅದನ್ನು ಆದ್ಯತೆ ಮೇಲೆ ಬಗೆಹರಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಹಿಂದೆ ತಾಲೂಕಿನಲ್ಲಿ ನಾಮ್‌ಕೇ ವಾಸ್ತೆ ವಿದ್ಯುತ್ ಪ್ರಸರಣ ಸಂಪರ್ಕ ಇತ್ತು. ಮಂಡಗದ್ದೆಗೆ ಮುತ್ತಿನಕೊಪ್ಪದಿಂದ ವಿದ್ಯುತ್ ಕೇಬಲ್ ಬರುತ್ತಿತ್ತು. ಮಳೆಗಾಲ, ತುಂಗಾ ನದಿ ಪ್ರವಾಹ ಕಾರಣಕ್ಕೆ ವಾರಗಟ್ಟಲೇ ವಿದ್ಯುತ್ ವ್ಯತ್ಯಾಸವಾಗುತ್ತಿತ್ತು. ಈಗ ಉಪಕೇಂದ್ರ ಆರಂಭವಾಗಿದ್ದು, ರೈತರ ಪಂಪ್ ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಲಭಿಸಲಿದೆ. ಕಮ್ಮರಡಿ, ಕೋಣಂದೂರು, ಬೆಜ್ಜವಳ್ಳಿ ಉಪಕೇಂದ್ರಗಳು ಸ್ಥಳೀಯ ಪೂರೈಕೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿವೆ. ಎಂ.ಕೆ.ಬೈಲು, ಅಮೃತ, ಬೈಸೆ ಉಪಕೇಂದ್ರಗಳಿಗೆ ನಿವೇಶನ ಗುರುತು ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಮಂಡಗದ್ದೆ ಸೊಸೈಟಿ ಅಧ್ಯಕ್ಷ ಸಿಂಧುವಾಡಿ ಸತೀಶ್, ಮಂಡಗದ್ದೆ ಗ್ರಾಪಂ ಉಪಾಧ್ಯಕ್ಷೆ ಸುನೀತಾ ನಾಯ್ಕ, ತೂದೂರು ಗ್ರಾಪಂ ಉಪಾಧ್ಯಕ್ಷ ಶರತ್ ಕಾವೇರಿ, ಮೆಸ್ಕಾಂ ಇಇ ಮುರಳಿಮೋಹನ್, ಎಸ್.ಸಿ.ಸುರೇಶ್, ಮುಖಂಡರಾದ ಕವಿರಾಜ್, ರಾಘವೇಂದ್ರ, ಮಧುರಾಜ್ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net