

ಆಲೂರು: ತಾಲೂಕಿನ ಹೊಸೂರು ಗ್ರಾಮದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕುಡಿಯುವ ನೀರಿಗೆ ಹಾಗೂ ಕೃಷಿ ಚಟುವಟಿಕೆಗೆ ಸಮಸ್ಯೆಯಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪಟ್ಟಣದ ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಬೈರಾಪುರ ಪಂಚಾಯಿತಿಗೆ ಸೇರಿದ ಹೊಸೂರು ಗ್ರಾಮದಲ್ಲಿ ಸರಿಯಾಗಿ ವಿದ್ಯುತ್ ಇಲ್ಲದೆ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ತೀವ್ರ ಪರದಾಡುವಂತಾಗಿದೆ. ಅಲ್ಲದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದೆ. 1980ರ ದಶಕದಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬ ಹಾಗೂ ವೈಯರ್‌ಗಳನ್ನು ಹಳೆಯದಾಗಿದ್ದು, ಅವುಗಳು ಜೋತು ಬಿದ್ದಿವೆ. ಅವುಗಳನ್ನು ದುರಸ್ತಿ ಪಡಿಸುವಂತೆ ಹಲವು ಬಾರಿ ದೂರು ನೀಡಲಾಗಿದೆ. ಆದರೂ ಇದುವರೆವಿಗೂ ದುರಸ್ತಿ ಪಡಿಸಿಲ್ಲ. ಆದ್ದರಿಂದ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಗಳಾಗುತ್ತಿವೆ. ಇದರಿಂದ ಕುಡಿಯುವ ನೀರಿಗೆ ಹಾಹಾಕಾರವಾಗಿದೆ ಎಂದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ನಿವಾಸಿ ಧನಂಜಯ ಮಾತನಾಡಿ, ದಿನದ 24 ಗಂಟೆ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಟಿಸಿ ಕಂಬಗಳನ್ನು ಅಳವಡಿಸಲಾಗಿದೆ. ಆದರೆ ಕೇವಲ 2 ಗಂಟೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಓದಲು ತುಂಬಾ ತೊಂದರೆಯಾಗುತ್ತಿದೆ. ಜತೆಗೆ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದೆ. ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ತಕ್ಷಣ ಇತ್ತ ಗಮನಹರಿಸಬೇಕು. ಇಲ್ಲದಿದ್ದರೆ ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಪಾಲಾಕ್ಷ ಮಾತನಾಡಿದರು. ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್, ಗ್ರಾಮಸ್ಥರಾದ ಜಯಕುಮಾರ್, ನಂದೀಶ್, ನಟೇಶ್, ಸುನಿಲ್, ಶಶಿಧರ, ಧನಂಜಯ, ಪ್ರಕಾಸ್, ವಿರೂಪಾಕ್ಷ ಇತರರು ಉಪಸ್ಥಿತರಿದ್ದರು.