ವಿದ್ಯುತ್ ಸಬ್‌ಸ್ಟೇಷನ್ ನಿರ್ಮಿಸಲು ಜನಪ್ರತಿನಿಧಿಗಳು ವಿಫಲ: ಖಾಲಿ ಕೊಡದೊಂದಿಗೆ ಪ್ರತಿಭಟನೆ

13blrp4
ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಿಸುವಂತೆ ಒತ್ತಾಯಿಸಿ ಖಾಲಿ ಕೊಡದೊಂದಿಗೆ ತಾಲೂಕು ಕಚೇರಿ ಮುಂದೆ ಪ್ರತಿಭಟಿಸುತ್ತಿರುವ ಏಕಾಂಗಿ ಹೊರಾಟಗಾರ ತೀರ್ಥಪ್ಪ
Published on

ಬೇಲೂರು: ಬಿಕ್ಕೋಡು ಗ್ರಾಮಕ್ಕೆ ಸರ್ಕಾರದಿಂದ ವಿದ್ಯುತ್ ಸಬ್ ಸ್ಟೇಷನ್ ಮಂಜೂರಾಗಿದ್ದು, ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಜನಪ್ರತಿನಿಧಿಗಳ ನಡೆ ಖಂಡಿಸಿ ತಾಲೂಕು ಕಚೇರಿ ಮುಂಭಾಗ ಏಕಾಂಗಿ ಹೋರಾಟಗಾರ ತೀರ್ಥಪ್ಪ ಖಾಲಿ ಕೊಡದೊಂದಿಗೆ ಬುಧವಾರ ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ತೀರ್ಥಪ್ಪ, ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಸಾರ್ವಜನಿಕರ ಅನುಕೂಲಕ್ಕಾಗಿ ವಿದ್ಯುತ್ ಸಬ್ ಸ್ಟೇಷನ್ ಅನ್ನು ಸರ್ಕಾರ ಮಂಜೂರು ಮಾಡಿ ಸಾಕಷ್ಟು ವರ್ಷಗಳಾಗಿದೆ. ಆದರೂ ಇದುವರೆಗೂ ಜನಪ್ರತಿನಿಧಿಗಳು ಕೆಲಸ ಪ್ರಾರಂಭಿಸಿಲ್ಲ ಎಂದು ದೂರಿದರು.

ಇಲ್ಲಿ ಸಬ್ ಸ್ಟೇಷನ್ ನಿರ್ಮಾಣವಾದರೆ ಈ ಭಾಗದ 125ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗುತ್ತದೆ. ಈಗ ವಿದ್ಯುತ್ ಸರಬರಾಜು ವ್ಯವಸ್ಥೆ ಸರಿಯಿಲ್ಲದೆ ಜನರು ಪರಿತಪಿಸುವಂತಾಗಿದೆ. ಹಿಂದೆ ಶಾಸಕರಾಗಿದ್ದ ದಿ.ವೈ.ಎನ್.ರುದ್ರೇಶಗೌಡ ಹಾಗೂ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಸಬ್ ಸ್ಟೇಷನ್‌ಗೆ ಚಾಲನೆ ನೀಡಿದ್ದು ಬಿಟ್ಟರೆ, ಇದುವರೆಗೂ ಯಾರೂ ಇತ್ತ ತಲೆಹಾಕದೆ ಇರುವುದು ದುರದೃಷ್ಟಕರ ಸಂಗತಿ ಎಂದರು.

ಸ್ಥಳೀಯರ ಅನುಕೂಲಕ್ಕಾಗಿ ಮಿನಿ ವಾಟರ್ ಟ್ಯಾಂಕ್, ರೈಸ್‌ಮಿಲ್ ಇದ್ದರೂ ವಿದ್ಯುತ್ ಇಲ್ಲದೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಗಮನ ಹರಿಸಿ ಬಿಕ್ಕೋಡಿಗೆ ಆದಷ್ಟು ಬೇಗ ವಿದ್ಯುತ್ ಸಬ್ ಸ್ಟೇಷನ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net