ವಿದ್ಯುತ್ ಸಂಪರ್ಕಕ್ಕೆ ಗ್ರಾಮಸ್ಥರ ಆಗ್ರಹ

13 HANUR 2
ಪಡಸಲನತ್ತ ಗ್ರಾಮದಲ್ಲಿ ಅಳವಡಿಸಲಾಗಿರುವ ಸೋಲಾರ್ ಪ್ಲಾಂಟ್
Published on

ಮಹದೇಶ್ವರಬೆಟ್ಟ/ ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕುಗ್ರಾಮ ಪಡಸಲನತ್ತಕ್ಕೆ ಸೋಮವಾರ ಸೆಸ್ಕ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ನಿಷ್ಕ್ರಿಯಗೊಂಡಿದ್ದ ಸೋಲಾರ್ ಬ್ಯಾಟರಿಗಳನ್ನು ಪರಿಶೀಲಿಸಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪತ್ರಿಕೆ ಬಗ್ಗೆ ಮೆಚ್ಚುಗೆ: ಗ್ರಾಮಕ್ಕೆ ಕೋಟ್ಯಂತರ ರೂ. ವ್ಯಯಿಸಿ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಸೋಲಾರ್ ನಿಷ್ಕ್ರಿಯಗೊಂಡಿರುವ ಪರಿಣಾಮ ಕಳೆದ ಎರಡೂವರೆ ವರ್ಷದಿಂದ ಇಲ್ಲಿನ ಜನರಿಗೆ ವಿದ್ಯುತ್ ಸಂಪರ್ಕ ಇಲ್ಲವಾಗಿತ್ತು. ಇದರಿಂದ ರಾತ್ರಿಯನ್ನು ಕತ್ತಲೆಯಲ್ಲೆ ಕಳೆಯುವಂತಾಗಿತ್ತು. ಈ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಬೆನ್ನಲ್ಲೆ ಸೋಮವಾರ ಸೆಸ್ಕ್ ಹನೂರು ಉಪ ವಿಭಾಗದ ಎಇಇ ಶಂಕರ್ ಹಾಗೂ ಜೆಇ ಮಹೇಶ್ ಗ್ರಾಮಕ್ಕೆ ಭೇಟಿ ನೀಡಿ ಸೋಲಾರ್ ಪ್ಲಾಂಟ್ ಹಾಗೂ ಸೋಲಾರ್ ಬ್ಯಾಟರಿಗಳನ್ನು ಪರಿಶೀಲಿಸಿದ್ದಾರೆ. ಈ ದಿಸೆಯಲ್ಲಿ ಗ್ರಾಮಸ್ಥರು ಪತ್ರಿಕೆಯ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಸೌಕರ್ಯಕ್ಕೆ ಒತ್ತಾಯ: ಗ್ರಾಮಕ್ಕೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲು 60 ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಕಳೆದ ಡಿಸೆಂಬರ್‌ನಲ್ಲಿ 15 ಹಾಗೂ ಜನವರಿಯಲ್ಲಿ 7 ಬ್ಯಾಟರಿಗಳನ್ನು ಬದಲಾವಣೆ ಮಾಡಲಾಗಿದೆ. ಆದರೆ ಇನ್ನುಳಿದ 38 ಬ್ಯಾಟರಿಗಳನ್ನು ಬದಲಾವಣೆ ಮಾಡಲಾಗಿಲ್ಲ. ಇದರಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಹೀಗಾಗಿ ವಿದ್ಯುತ್ ಸೌಕರ್ಯ ಕಲ್ಪಿಸಿದ್ದರೂ ಕತ್ತಲೆಯಲ್ಲಿ ಜೀವನ ದೂಡುವಂತಾಗಿತ್ತು. ಈ ಯೋಜನೆ ಇದ್ದು ಇಲ್ಲದಂತಾಗಿದ್ದು, ಪ್ರಯೋಜನಕ್ಕೆ ಬಾರದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಮುತುರ್ವಜಿ ವಹಿಸಿ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net