

ಹುಬ್ಬಳ್ಳಿ: ಆಗಸ್ಟ್ (2019)ನಲ್ಲಿಯ ದಾಖಲೆಯ ಮಳೆಗೆ ಮನೆ ಕಳೆದುಕೊಂಡು ಈಗಷ್ಟೇ ಸಾವಕಾಶವಾಗಿ ಬದುಕು ಕಟ್ಟಿಕೊಳ್ಳುತ್ತಿರುವ ಸಂತ್ರಸ್ತರ ಮೇಲೆ ವಿದ್ಯುತ್ ಶುಲ್ಕ ಹಾಗೂ ನೀರಿನ ಕರ ಭಾರ ಬಿದ್ದಿದೆ. ಮನೆಯೇ ಇಲ್ಲದ ಮೇಲೆ ಕರ ಎಲ್ಲಿಂದ ಕಟ್ಟಬೇಕು ಎಂದು ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ.
ಹು-ಧಾ ಅವಳಿ ನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ ದಾಖಲೆ ಮಳೆಗೆ 17 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದವು. ಈಗಲೂ ಬಹಳಷ್ಟು ಸಂತ್ರಸ್ತರು ಮನೆ ನಿರ್ವಣಕ್ಕೆ ಬೆವರು ಸುರಿಸುತ್ತಿದ್ದಾರೆ. ಸೂಕ್ತ ಪರಿಹಾರ ಸಿಕ್ಕಿಲ್ಲವೆಂಬ ದೂರುಗಳಿವೆ. ಇದರ ನಡುವೆ ವಿದ್ಯುತ್ ಶುಲ್ಕ ಹಾಗೂ ನೀರಿನ ಕರ ಹೇರಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಕರ್ನಾಟಕ ಜಲ ಮಂಡಳಿ ಹಾಗೂ ಹೆಸ್ಕಾಂ, ಕರ ಪಾವತಿಸುವಂತೆ ಬಿಲ್ ನೀಡಿವೆ.
ಸಂತ್ರಸ್ತರು ವಾಸಿಸುತ್ತಿದ್ದ ಮನೆ ಪೂರ್ಣ ಹಾಗೂ ಭಾಗಶಃ ಕುಸಿದರೂ ನೀರಿನ ಸಂಪರ್ಕ ಕಡಿತಗೊಂಡಿರಲಿಲ್ಲ. ಸಂತ್ರಸ್ತರು ಯಾರೂ ಕಡಿತಗೊಳಿಸುವಂತೆ ಜಲಮಂಡಳಿಗೆ ಹೇಳಿರಲಿಲ್ಲ. ಯಾಕೆಂದರೆ ಮರು ಸಂಪರ್ಕ ಪಡೆಯಬೇಕಾದರೆ ಸಾವಿರಾರು ರೂ. ಶುಲ್ಕ ಪಾವತಿಸಬೇಕು. ಮೀಟರ್ ಇಲ್ಲದ, ನೀರು ಬಳಕೆಯೇ ಮಾಡದ ಪ್ರತಿ ಸಂಪರ್ಕಕ್ಕೆ ಮಾಸಿಕ ಕನಿಷ್ಠ ದರ 175 ರೂ. ವಿಧಿಸಲಾಗಿದೆ. ಅದೇ ರೀತಿ ಮೀಟರ್ ಇರುವ ಪ್ರತಿ ಸಂಪರ್ಕಕ್ಕೆ ಕನಿಷ್ಠ 90 ರೂ. ಹಾಗೂ ಬಳಕೆ ಮಾಡಿದ್ದರೆ ಅದಕ್ಕನುಗುಣವಾಗಿ ಶುಲ್ಕ ಆಕರಿಸಲಾಗಿದೆ. ಕಳೆದ ಐದು ತಿಂಗಳ ನೀರಿನ ಕರ 800 ರಿಂದ 1200 ರೂ. ನಡುವೆ ಇದೆ. ವಾಸ್ತವ್ಯ ಇಲ್ಲದಿದ್ದರೂ ನೀರಿನ ಕರ ಪಾವತಿಸಬೇಕಾಗಿದೆ ಎಂದು ಸಂತ್ರಸ್ತರು ದೂರಿದ್ದಾರೆ. ಅಲ್ಲದೆ, ಇಲ್ಲಿ ವಿದ್ಯುತ್ ಬಳಕೆ ಮಾಡದಿದ್ದರೂ ಮಾಸಿಕ ಕನಿಷ್ಠ 70 ರೂ. ಪಾವತಿಸಬೇಕು. ಈ ರೀತಿ ಲೆಕ್ಕ ಹಾಕಿ ಬಿಲ್ ನೀಡಲಾಗಿದೆ. ಮನೆಯೇ ಇಲ್ಲದ ಮೇಲೆ ಬಳಕೆ ಮಾಡುತ್ತಿಲ್ಲವೆಂಬ ಕಾರಣ ವಿದ್ಯುತ್ ಸಂಪರ್ಕ ಕಡಿತ ಮಾಡಲು ಸಂತ್ರಸ್ತರು ಹೋಗಿಲ್ಲ. ಯಾಕೆಂದರೆ, ಮುಂದೆ ಬೇಕಾಗುತ್ತದೆ. ಆಗ ಮರು ಸಂಪರ್ಕ ಪಡೆಯುವುದು ವೆಚ್ಚದಾಯಕ. ಇದೀಗ ಕನಿಷ್ಠ ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ.
17024 ಮನೆಗಳಿಗೆ ಹಾನಿ: ಆಗಸ್ಟ್ನಲ್ಲಿ ಸುರಿದ ದಾಖಲೆ ಮಳೆಗೆ ಧಾರವಾಡ ಜಿಲ್ಲೆಯಲ್ಲಿ ಎ, ಬಿ, ಸಿ ಕೆಟಗರಿ ಸೇರಿ 17024 ಮನೆಗಳಿಗೆ ಹಾನಿಯಾಗಿತ್ತು. ಇದರಲ್ಲಿ ಶೇ. 75ಕ್ಕಿಂತ ಹೆಚ್ಚು ಹಾನಿಗೀಡಾದ ಎ ಕೆಟಗರಿಯ 111 ಮನೆಗಳು ಹಾಗೂ ಶೇ. 25ರಿಂದ 75 ರಷ್ಟು ಹಾನಿಗೊಳಗಾದ ಬಿ ಕೆಟಗರಿಯ 1631 ಮನೆಗಳಿವೆ. ಎ ಮತ್ತು ಬಿ ಕೆಟಗರಿಯಲ್ಲಿನ ಮನೆಗಳ ಮರು ನಿರ್ವಣಕ್ಕೆ 5 ಲಕ್ಷ ರೂ. ಹಾಗೂ ಸಿ ಕೆಟಗರಿಯಲ್ಲಿ ಮನೆಯ ದುರಸ್ತಿಗೆಂದು 3 ಲಕ್ಷ ರೂ. ಪರಿಹಾರ ಘೊಷಿಸಲಾಗಿತ್ತು.
ಕರ ಪಾವತಿಸುವಂತೆ ಬಿಲ್ ನೀಡಿದಾಗ ತಾವು ನೀರು ಬಳಕೆ ಮಾಡಿಲ್ಲ ಎಂದು ಹೇಳುವುದು ಸರಿಯಲ್ಲ. ಹಾಗಾದರೆ ನೀರು ಬಳಕೆ ಮಾಡಿದ್ದು ಯಾರು? ದೀರ್ಘ ಅವಧಿಯವರೆಗೆ ಮನೆಯಲ್ಲಿ ವಾಸ್ತವ್ಯ ಇಲ್ಲದಿದ್ದರೆ ಸಂಪರ್ಕ ಕಡಿತಗೊಳಿಸುವಂತೆ ಸಂತ್ರಸ್ತರು ಹೇಳಬೇಕಿತ್ತು. | ಎಚ್.ಎಸ್. ರಾಜಗೋಪಾಲ ಕರ್ನಾಟಕ ಜಲ ಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್