

ಬೈಲಹೊಂಗಲ, ಬೆಳಗಾವಿ: ತಾಲೂಕಿನ ದೊಡವಾಡ ಗ್ರಾಮಕ್ಕೆ ಪೂರೈಸುವ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸ್ವತಂತ್ರಗೊಳಿಸಿ ವಿದ್ಯುತ್ ಸರಬರಾಜು ಮಾಡಲು ಹೆಸ್ಕಾಂ ಕ್ರಮ ಕೈಗೊಳ್ಳಬೇಕು ಎಂದು ಮಲ್ಲಮ್ಮನ ಬೆಳವಡಿ ಗ್ರಾಮದ ಹೆಸ್ಕಾಂ ಶಾಖಾಧಿಕಾರಿಗೆ ಗ್ರಾಮಸ್ಥರು ಮಂಗಳವಾರ ಮನವಿ ಸಲ್ಲಿಸಲಾಯಿತು.
ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ನಿಂಗಪ್ಪ ಚೌಡಣ್ಣವರ ಮಾತನಾಡಿ, ತಾಲೂಕಿನಲ್ಲಿಯೇ ಹೆಚ್ಚಿನ ಜನಸಂಖ್ಯೆ ಮತ್ತು ಕೃಷಿ ಭೂಮಿ ಹೊಂದಿರುವ ದೊಡವಾಡ ಗ್ರಾಮಕ್ಕೆ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಅನೇಕ ವರ್ಷಗಳಿಂದ ತೊಂದರೆಯಾಗುತ್ತಿದೆ. ಜನರ ದೈನಂದಿನ ಚಟುವಟಿಕೆಗಳಿಗೆ ಮತ್ತು ರೈತರ ಕೃಷಿ ಕೆಲಸಗಳಿಗೆ ಅನನುಕೂಲವಾಗುತ್ತಿದೆ. ಸುಮಾರು 4 ಸಾವಿರ ವಿದ್ಯುತ್ ಸಂಪರ್ಕ ಇರುವ ಗ್ರಾಮವನ್ನು ಬೇರೆ ಗ್ರಾಮಗಳ ಜತೆ ಕ್ಲಬ್ ಮಾಡದೆ ಸ್ವತಂತ್ರ ಲೈನ್ ಪೂರೈಸಬೇಕು. ಕಡಸಗಟ್ಟಿ ಗ್ರಾಮದ ಬಳಿ ಹೊಸ ಎಸ್‌ಒ ಶಾಖೆ ಆರಂಭವಾಗುತ್ತಿರುವುದರಿಂದ ದೊಡವಾಡ ಗ್ರಾಮಕ್ಕೆ ಸ್ವತಂತ್ರ ಲೈನ್ ಮಾಡಲು ಅವಕಾಶವಿದೆ. ಆದ್ದರಿಂದ ಮೇಲಧಿಕಾರಿಗಳ ಗಮನಕ್ಕೆ ತಂದು ಗ್ರಾಮಕ್ಕೆ ಸ್ವತಂತ್ರ ವಿದ್ಯುತ್ ಸರಬರಾಜು ಪೂರೈಕೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ರಾಚಯ್ಯ ಹಿರೇಮಠ, ಈರಪ್ಪ ಗಂಟಿ, ವಿರೂಪಾಕ್ಷಪ್ಪ ಜಮನೂರ, ಬಸಪ್ಪ ಗಂಟಿ ಮತ್ತಿತರರು ಉಪಸ್ಥಿತರಿದ್ದರು.