

ಆಯನೂರು: ಅಸಮರ್ಪಕ ವಿದ್ಯುತ್ ವಿತರಣೆ ವಿರೋಧಿಸಿ ಆಯನೂರು ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಸೋಮವಾರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.
ಈ ಭಾಗದ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ವಿದ್ಯುತ್ ಸಮಸ್ಯೆಯಿಂದಾಗಿ ಕೈಗೆ ಬಂದ ಫಸಲೆಲ್ಲ ಒಣಗುತ್ತಿದೆ. ರೈತರಿಗೆ ಸಾವೇ ಗತಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಸಹ ಎದುರಾಗಿದೆ. ವೊಲ್ಟೇಜ್ ಸಮಸ್ಯೆಯಿಂದಾಗಿ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. ಹೊಸದಾಗಿ ಹಾಕಿರುವ ಟಿ.ಸಿ.ಗಳೆಲ್ಲ ಹಾಳಾಗಿವೆ. ವಾರ ಕಳೆದರೂ ದುರಸ್ತಿಗೊಂಡಿರುವ ಟಿ.ಸಿ. ರಿಪೇರಿ ಮಾಡಿಲ್ಲ ಎಂದು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿದರು.
ಸೂಡೂರು, ಕುರಂಬಳ್ಳಿ ಗೇಟ್, ಮಂಡಘಟ್ಟ, ರಾಗಿಹೊಸಳ್ಳಿ, ಚಿನ್ನಮನೆ, ಮತ್ಲಿ, ಎರೆಬೀಸು, ಆಡಿನಕೊಟ್ಟಿಗೆ, ಚೆನ್ನಳ್ಳಿ, ಸಿರಿಗೆರೆ, ಆಯನೂರು ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕುಂಸಿ ಮೆಸ್ಕಾಂ ಕಚೇರಿಯ ಎಇಇ ಯಶವಂತ ನಾಯ್ಕ, ಆಯನೂರು ಜೆಇ ವೀರೇಶ್ ದಳವಾಯಿ ಸ್ಥಳಕ್ಕಾಗಮಿಸಿ ರೈತರ ಸಮಸ್ಯೆ ಆಲಿಸಿ, ಶೀಘ್ರ ಪರಿಹಾರದ ಭರವಸೆ ನೀಡಿದರು.
ತ್ರೀಫೇಸ್ ವಿದ್ಯುತ್‌ಗೆ ಹಕ್ಕೋತ್ತಾಯ: ಸರ್ಕಾರ ನಿಗದಿ ಪಡಿಸಿರುವಂತಗೆ 7 ಗಂಟೆಗಳ ಕಾಲವೂ ತ್ರೀಫೇಸ್ ವಿದ್ಯುತ್ ಪೂರೈಸಬೇಕೆಂದು ಪ್ರತಿಭಟನಾನಿರತ ರೈತರು ಹಕ್ಕೋತ್ತಾಯ ಮಂಡಿಸಿದರು. ಕಳೆದ 2 ತಿಂಗಳಿಂದ ಕೇವಲ 4 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಕೊಡಲಾಗುತ್ತಿದೆ. ಅದರಲ್ಲೂ ಸೂಕ್ತವಾದ ವೋಲ್ಟೆಜ್ ಇಲ್ಲವಾಗಿದೆ. ಇದರಿಂದ ಯಾವುದೇ ಪಂಪ್‌ಸೆಟ್ ಓಡುತ್ತೀಲ್ಲ. ರೈತರು ಬೆಳೆದ ಬೆಳೆ ಶೇ.50 ಭಾಗ ಸುಟ್ಟು ಹೋಗುವಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಶೇ.90 ಭಾಗ ಬೆಳೆ ಹಾನಿಯಾಗಿದಲಿದೆ. ಕೂಡಲೆ ಮೆಸ್ಕಾಂ ಅಧಿಕಾರಿಗಳು 7 ಗಂಟೆ ತ್ರೀ ಫೇಸ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.