ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಿಲ್ಲ

bescom
Published on

ತಾಂತ್ರಿಕ ತೊಂದರೆಯಿಂದ ಪೂರೈಕೆಗೆ ಅಡೆತಡೆ ಬೆಸ್ಕಾಂ ಎಇಇ ವಿನಯ್ ಕುಮಾರ್ ಹೇಳಿಕೆ

ದೊಡ್ಡಬಳ್ಳಾಪುರ: ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಸುರಿಮಳೆಯೇ ಸುರಿಯಿತು!.

ನಗರದ ಬೆಸ್ಕಾಂ ಕಚೇರಿಯಲ್ಲಿ ಶನಿವಾರ ನಗರ ಉಪವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ವಿನಯ್ ಕುಮಾರ್ ಎಚ್.ಪಿ ನೇತೃತ್ವದಲ್ಲಿ ಕುಂದು ಕೊರತೆ ಸಭೆ ಆಯೋಜಿಸಲಾಗಿತ್ತು.

ನಗರದಲ್ಲಿ ಯಾವುದೇ ಮಾಹಿತಿ ನೀಡದೆ ದಿನಕ್ಕೆ ಐದರಿಂದ ಆರು ಬಾರಿ ವಿದ್ಯುತ್ ಸ್ಥಗಿತಗೊಳಿಸುತ್ತೀರಿ. ಲೋಡ್ ಶೆಡ್ಡಿಂಗ್ ಬಗ್ಗೆ ಜನರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಕನ್ನಡಿಗರ ಬಣದ ಕರವೇ ಅಧ್ಯಕ್ಷ ಚಂದ್ರಶೇಖರ್ ಅಸಮಾಧಾನ ಹೊರಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಇಇ ವಿನಯ್ ಕುಮಾರ್, ಸದ್ಯ ಸರ್ಕಾರ ಯಾವುದೇ ಲೋಡ್ ಶೆಡ್ಡಿಂಗ್ ಜಾರಿ ಮಾಡಿಲ್ಲ. ಈ ಬಗ್ಗೆ ಜನರಲ್ಲಿ ಗೊಂದಲಗಳಿವೆ. ಲೋಡ್ ಶೆಡ್ಡಿಂಗ್ ಜಾರಿಯಾದರೆ ಒಮ್ಮೆಲೆ ಗಂಟೆಗಳ ಗಟ್ಟಲೇ ವಿದ್ಯುತ್ ಸ್ಥಗಿತಗೊಳ್ಳುತ್ತದೆ. 5 ರಿಂದ 10 ನಿಮಿಷ ವಿದ್ಯುತ್ ಪೂರೈಕೆ ಸ್ಥಗಿತವು ಲೋಡ್ ಶೆಡ್ಡಿಂಗ್ ವ್ಯಾಪ್ತಿಗೆ ಬರುವುದಿಲ್ಲ. ಹಾಗೇನಾದರೂ ಸರ್ಕಾರ ಲೋಡ್ ಶೆಡ್ಡಿಂಗ್ ಜಾರಿ ಮಾಡಿದರೆ ಆಗ ಮಾದ್ಯಮಗಳ ಮೂಲಕ ಮಾಹಿತಿ ನೀಡಬಹುದು. ಸದ್ಯ ಈ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ವಾರಗಳಂದು ಸಮಸ್ಯೆ ಆಗದು

ತಾಲೂಕಿನಾದ್ಯಂತ ಸಾವಿರಾರು ನೇಕಾರ ಕುಟುಂಬಗಳಿದ್ದು, ಮಗ್ಗವೇ ಜೀವನಕ್ಕೆ ಆಧಾರವಾಗಿದೆ. ವಾರ ಪೂರ್ತಿ ಸೀರೆ ನೇಯುವ ನೇಕಾರರಿಗೆ ವಿದ್ಯುತ್ ಕಡಿತಗೊಂಡರೆ ಬಾರಿ ಮೊತ್ತದ ನಷ್ಟ ಉಂಟಾಗುತ್ತದೆ. ಮಗ್ಗದ ಮಾಲೀಕರಿಗೆ ವಾರದ ಬಟವಾಡೆ ನೀಡಲು ಕಷ್ಟವಾಗುತ್ತದೆ. ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನೇಕಾರರ ಸಂಘದ ಮುಖಂಡ ಹೇಮಂತ್ ರಾಜ್ ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿನಯ್ ಕುಮಾರ್, ಹೌದು, ಈ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಇನ್ನು ಮುಂದೆ ವಾರದಲ್ಲಿ ಗುರುವಾರ, ಶುಕ್ರವಾರ ಮತ್ತು ಶನಿವಾರ ವಿದ್ಯುತ್ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಮತ್ತು ಸಮಸ್ಯೆ ಉಂಟಾದರೆ ಎರಡು ಮೂರು ದಿನಗಳ ಮೊದಲೇ ಸಮಸ್ಯೆಗಳ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು ಎಂದರು.

ಹೊಸ ಮನೆಗಳಿಗೆ ಮೀಟರ್ ಸಂಪರ್ಕ ಸಮಸ್ಯೆ

ಸಾರ್ವಜನಿಕರು ಕೋಟ್ಯಂತರ ರೂ. ಸಾಲ ಮಾಡಿ ಮನೆ ಕಟ್ಟಿ ಕೊನೆಗೆ ವಿದ್ಯುತ್ ಸಂಪರ್ಕಕ್ಕೆ ಒಸಿ (ಣ್ಚ್ಚ್ಠಚ್ಞ್ಚ ಇಛ್ಟಿಠಿಜ್ಛಿಜ್ಚಿಠಿಜಿಟ್ಞ) ಸಿಗದೆ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಭೆಯ ಮೂಲಕ ಸರ್ಕಾರದ ಗಮನಕ್ಕೆ ತರಬೇಕು ಎಂದು ಕೆ.ಆರ್.ಎಸ್ ಪಕ್ಷದ ಮುಖಂಡ ಶಿವಶಂಕರ್ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಇಇ ವಿನಯ್ ಕುಮಾರ್, ಸುಪ್ರೀಂಕೋರ್ಟ್ ಆದೇಶವನ್ನು ನಾವು ಯಥಾವತ್ತಾಗಿ ಪಾಲಿಸುತ್ತಿದ್ದೇವೆ. ಇದರ ಬಗ್ಗೆ ನಾವು ಪ್ರತಿಕ್ರಿಯಿಸಲು ಆಗದು. ಕೋರ್ಟ್ ಆದೇಶದಲ್ಲಿ ಇಂಥದ್ದೆ ಅಳತೆಯ ಮನೆ ಅಥವಾ ಕಟ್ಟಡ ಎಂದು ನಮೂದಿಸಿಲ್ಲ. ಆದ್ದರಿಂದಲೇ ಮನೆ ಮಾಲೀಕರಿಗೆ ಈ ಗೊಂದಲ ಉಂಟಾಗಿದೆ. ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕೊಡಲು ಸಮಸ್ಯೆ ಇಲ್ಲ. ಇಲ್ಲಿ ಇರುವುದು ಒಸಿ ಸಮಸ್ಯೆ. ಸದ್ಯ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನಷ್ಟೆ ಪಾಲನೆ ಮಾಡುತ್ತಿದ್ದೇವೆ. ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಚರ್ಚೆಯಾಗಿದೆ. ಯಾವ ಮಾನದಂಡಗಳ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಬಹುದು ಎಂಬ ಅಂಶಗಳ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಆದಷ್ಟು ಬೇಗ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಬಹುದು ಕಾದು ನೋಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net