

ಶೃಂಗೇರಿ: ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಕುಳ್ಳಿಯಲ್ಲಿ ಮಳೆ, ಗಾಳಿಗೆ 38 ದಿನಗಳಿಂದ ವಿದ್ಯುತ್ ವ್ಯತ್ಯಯವಾಗುತ್ತಿದ್ದು ಮೆಸ್ಕಾಂ ಕೇಂದ್ರ ಕಚೇರಿ ಮಂಗಳೂರಿಗೆ ದೂರವಾಣಿ ಕರೆ ಮಾಡಿದರೆ ಸರಿಪಡಿಸಲು ಸ್ಥಳೀಯ ಕಚೇರಿಗೆ ಆದೇಶಿಸಿದರು. ಆದರೆ ಸ್ಥಳೀಯ ಅಧಿಕಾರಿಗಳು ಸರಿಪಡಿಸುತ್ತೇವೆ ಎಂದು ಹೇಳಿ ಸುಮ್ಮನಾಗಿದ್ದಾರೆ ಎಂದು ಕೃಷಿಕ ಅಣ್ಕುಳ್ಳಿ ನಂದನ್ ದೂರಿದರು.
ಶುಕ್ರವಾರ ಮೆಸ್ಕಾಂ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮೆಸ್ಕಾಂ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಮೆಸ್ಕಾಂ ಎಇಇ ದೀಪಕ್ ಪ್ರತಿಕ್ರಿಯಿಸಿ, ಜೆಜೆಎಂ ಯೋಜನೆಯಡಿ ಅಲ್ಲಿ ಟಿಸಿ ಅಳಡಿಸಲಾಗಿದೆ. ಆದ್ದರಿಂದ ಸಂಪರ್ಕ ನೀಡಲು ಬಾಕಿ ಇದ್ದು ತ್ವರಿತಗತಿಯಲ್ಲಿ ಪರಿಹಾರ ನೀಡುತ್ತೇವೆ ಎಂದರು.
ರೈತ ರಾಮಚಂದ್ರ ಹಾಲಂದೂರು ಮಾತನಾಡಿ, ಅಂಗುರ್ಡಿಯಲ್ಲಿರುವ ವಿದ್ಯುತ್ ಸ್ಥಾವರದಿಂದ ಹಾಲಂದೂರು ಭಾಗಕ್ಕೆ ವಿದ್ಯುತ್ ಸಂಪರ್ಕ ನೀಡಿದರೆ ನಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಪ್ರಸ್ತುತ ವಿದ್ಯುತ್ ಸಂಪರ್ಕ ಸುತ್ತಿಬಳಸಿ ಬಂದಿದ್ದು ಕೂಡಲೇ ನೂತನ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಿಕೊಡಬೇಕು ಎಂದರು.
ರೈತ ಉಳುವೆ ಚಂದ್ರಶೇಖರ್ ಮಾತನಾಡಿ, ವಿದ್ಯುತ್ ರೀಡಿಂಗ್ ಮಾಡಲು ನಮ್ಮ ಮನೆಗೆ ನಾಲ್ಕಾರು ತಿಂಗಳಿಂದ ಸಿಬ್ಬಂದಿ ಬರುತ್ತಿಲ್ಲ.ಪ್ರತಿ ತಿಂಗಳೂ ರೀಡಿಂಗ್ ಮಾಡಿ ಬಿಲ್ ನೀಡಿದರೆ ಹಣ ಪಾವತಿಸಲು ಸುಲಭವಾಗುತ್ತದೆ. ಒಂದೇ ಸಲ ಒಟ್ಟು ಬಿಲ್ ನೀಡಿದರೆ ಹಣ ಕಟ್ಟಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.
ಕೊಪ್ಪ ವೃತ್ತದ ಮೆಸ್ಕಾಂ ಎಇಇ ಸಿದ್ದೇಶ್ ಮಾತನಾಡಿ, ವಿದ್ಯುತ್ ರೀಡಿಂಗ್ ಮಾಡುವ ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಬಂದಿದ್ದು ಅವರ ಬಳಿ ಮಾಹಿತಿ ಪಡೆದು ಸಮಸ್ಯೆ ಸರಿಪಡಿಸಲಾಗುವುದು ಎಂದರು.
ಹೊಳೆಕೊಪ್ಪ ರಾಮಪ್ಪ ನಾಯ್ಕ ಮಾತನಾಡಿ, 60 ವರ್ಷದ ಹಿಂದಿನ ಮರದ ವಿದ್ಯುತ್ ಕಂಬವಿದ್ದು ಅದನ್ನು ಬದಲಿಸಿ ಕಾಂಕ್ರೀಟ್ ಕಂಬ ಹಾಕಿ ಎಂದು ಇಲಾಖೆಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು. ಅತ್ತುವಳ್ಳಿ ಕೃಷ್ಣಪ್ಪ ಮಾತನಾಡಿ, ನಮ್ಮ ಭಾಗದಲ್ಲಿ ಸುಮಾರು 22 ಕುಟುಂಬಗಳು ವಾಸವಾಗಿದ್ದು ಬೇಸಿಗೆಯಲ್ಲಿ ವೋಲ್ಟೇಜ್ ಸಮಸ್ಯೆ ಇದೆ. ತೋಟಗಳ ಮಧ್ಯೆ ವಿದ್ಯುತ್ ಲೈನ್ ಬಂದಿದ್ದು ಅದನ್ನು ರಸ್ತೆಯ ಸಮೀಪ ಸ್ಥಳಾಂತರಿಸಿಕೊಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಮೆಸ್ಕಾಂ ಅಧೀಕ್ಷಕ ಮಂಜುನಾಥ್, ಮೆಸ್ಕಾಂ ಅಧಿಕಾರಿಗಳಾದ ಹೇಮಂತ್, ಕೃಷ್ಣಾನಂದ ಇದ್ದರು.