ವಿದ್ಯುತ್ ಲೈನ್ ತಗುಲಿ ರೈತ ಸಾವು

15ark5
Published on

ಅರಕಲಗೂಡು: ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಶನಿವಾರ ಮರದ ಕೊಂಬೆ ಕಡಿಯುತ್ತಿದ್ದ ರೈತ ವಿದ್ಯುತ್ ಲೈನ್ ತಗುಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಗ್ರಾಮದ ಚಂದ್ರೇಗೌಡ ಮೃತ ದುರ್ದೈವಿ. ಈತ ಮನೆಯ ಮುಂದೆ ಬೆಳೆದಿದ್ದ ಮರದ ಕೊಂಬೆಗಳನ್ನು ಸವರುವ ಸಲುವಾಗಿ ಮೇಲೆ ಹತ್ತಿದ್ದು ಕಡಿದ ಕೊಂಬೆಗಳು ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ಲೈನ್ ಮೇಲೆ ಬಿದ್ದು ಕರೆಂಟ್ ಪ್ರವಹಿಸಿ ಸಾವಿಗೀಡಾಗಿದ್ದಾರೆ.

ರೈತ ಕುಟುಂಬದ ಮೃತ ಚಂದ್ರೇಗೌಡರಿಗೆ ಪತ್ನಿ ಗಾಯಿತ್ರಿ, 25 ವರ್ಷದ ಮಗಳು ಪೂಜಾ, 19 ವರ್ಷದ ಮಗ ಸಚಿನ್ ಇದ್ದಾರೆ. ಕುಟುಂಬದ ಯಜಮಾನನ್ನು ಕಳೆದುಕೊಂಡು ಪತ್ನಿ, ಮಕ್ಕಳು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಮನೆಯ ಮುಂದೆ ಹಾದು ಹೋಗಿರುವ ವಿದ್ಯುತ್ ಲೈನ್ ತುಂಡಾಗಿ ಇಲ್ಲವೇ, ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಪ್ರವಹಿಸಿ ಅನೇಕರು ಮೃತಪಡುವಂತಾಗಿದೆ. ಲಕ್ಕೂರಿನಲ್ಲೂ ಮನೆಯ ಮುಂದೆ ಹಾದು ಹೋಗಿರುವ ವಿದ್ಯುತ್ ಲೈನ್ ರೈತನ ಪ್ರಾಣಕ್ಕೆ ಮೃತ್ಯುಕೂಪವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಣನೂರು ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆ ನಡೆಸಲು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಆಸ್ಪತ್ರೆಯ ಶವಾಗಾರದ ಮುಂದೆ ಕುಟುಂಬಸ್ಥರ ರೋಧನ ಮನಕಲಕುವಂತಿತ್ತು. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net