ವಿದ್ಯುತ್ ರೈಲು ಸಂಚಾರ ಸುರಕ್ಷತೆ ಪರಿಶೀಲನೆ: 124 ಕಿ.ಮೀ ಉದ್ದದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣ

21CBP1
Published on

ಚಿಕ್ಕಬಳ್ಳಾಪುರ: ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದವರೆಗೆ ರೈಲ್ವೆ ವಿದ್ಯುದೀಕರಣ ಲೈನ್ ಕಾಮಗಾರಿ ನಿರ್ವಹಣೆ ಮತ್ತು ಪ್ರಾಯೋಗಿಕ ರೈಲು ಸಂಚಾರವನ್ನು ಕೇಂದ್ರ ರೈಲ್ವೆ ಸುರಕ್ಷತಾ ಪರಿಶೀಲನಾ ತಂಡವು ಇತ್ತೀಚೆಗೆ ಪರೀಕ್ಷಿಸಿದೆ. ಯಲಹಂಕದಿಂದ ದೇವನಹಳ್ಳಿ, ನಂದಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಮತ್ತು ಕೋಲಾರದ ಮೂಲಕ ಬಂಗಾರಪೇಟೆ ಜಂಕ್ಷನ್‌ವರೆಗಿನ 124 ಕಿ.ಮೀ ಉದ್ದದ ವಿದ್ಯುದೀಕರಣ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ. ಈ ಪೈಕಿ ಯಲಹಂಕ ಮತ್ತು ಚಿಕ್ಕಬಳ್ಳಾಪುರ ನಡುವಿನ ಗ್ರೌಂಡ್ ಅರ್ಥಿಂಗ್, ಹಳಿ ಲೈನ್‌ಗಾಗಿ ವಿದ್ಯುತ್ ಕಂಬ ಅಳವಡಿಕೆ ಸೇರಿ ಅಗತ್ಯ ಕೆಲಸ ಪೂರ್ಣಗೊಂಡಿದೆ.

ರೈಲ್ವೆ ಇಲಾಖೆಯ ಮುಖ್ಯ ಸುರಕ್ಷಾ ಅಧಿಕಾರಿಗಳಾದ ಅಭಯ್ ಕುಮಾರ್ ರಾಯ್, ಶ್ಯಾಮ್ ಸಿಂಗ್ ಅವರ ತಂಡವು ಇತ್ತೀಚೆಗೆ ಯಲಹಂಕದಿಂದ ಚಿಕ್ಕಬಳ್ಳಾಪುರಕ್ಕೆ ಪರೀಕ್ಷಾರ್ಥ ರೈಲಿನಲ್ಲಿ ಬರುವ ಮೂಲಕ ಪರೀಕ್ಷೆ ನಡೆಸಿದಾಗ ಸಮಸ್ಯೆ ಕಂಡು ಬಂದಿಲ್ಲ. ಸುರಕ್ಷತೆ ಖಾತ್ರಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ, ಹೆಚ್ಚಿಗೆ ಪ್ರಯಾಣಿಕರು ಸಂಚರಿಸುವ ಈ ಮಾರ್ಗದಲ್ಲಿ ಮೊದಲು ವಿದ್ಯುತ್ ಆಧಾರಿತ ರೈಲು ಓಡಿಸಲು ಚಿಂತಿಸಲಾಗಿದೆ. ಉಳಿದೆಡೆ ಸಹ ಕಾಮಗಾರಿ ನಡೆಯುತ್ತಿದೆ. ಇದು ಮುಗಿದ ಬಳಿಕ ಪೂರ್ಣ ಮಾರ್ಗದಲ್ಲಿ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.

ವಿಶೇಷ ಪೂಜೆ ಸಲ್ಲಿಕೆ: ಪರೀಕ್ಷಾರ್ಥ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದು ಒಳ್ಳೆಯ ಬೆಳವಣಿಗೆಗೆ. ಅವಿಭಜಿತ ಜಿಲ್ಲೆಯಲ್ಲಿ ರೈಲ್ವೆ ಸೌಕರ್ಯ ಹೆಚ್ಚಾಗಬೇಕು. ಪ್ರಯಾಣಿಕರು ಮತ್ತು ಉತ್ಪನ್ನಗಳ ಸಾಗಣೆಗೆ ಒಳ್ಳೆಯ ಸೇವೆ ಸಿಗಬೇಕು ಎಂದು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಡಿಸೇಲ್ ಇಂಜಿನ್ ರೈಲು ಚಾಲನೆ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಕಾರಕವಾದ ಹೆಚ್ಚಿನ ಹೊಗೆ ಹೊರಸೂಸುತ್ತದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಹಳಿ ಮಾರ್ಗ ವಿದ್ಯುದೀಕರಣ ಸಹಕಾರಿ. ಇದು ಹೊಗೆರಹಿತ, ನವೀಕರಿಬಹುದಾದ ಇಂಧನ ಬಳಕೆ, ಇಂಜಿನ್ ಕ್ಷಮತೆ ಹೆಚ್ಚಳ, ಪರಿಸರಸ್ನೇಹಿ ಸೇರಿ ನಾನಾ ರೀತಿಯಲ್ಲಿ ಹೆಚ್ಚು ಲಾಭದಾಯಕ ಎಂದು ತಿಳಿಸಿದರು. ರೈಲ್ವೆ ಹೋರಾಟ ಸಮಿತಿಯ ನಳಿನಾಕ್ಷಿ, ಆರ್.ವೆಂಕಟಾಚಲ, ಮುನಿಕೃಷ್ಣಪ್ಪ, ಲೋಕೇಶ್, ಪ್ರೇಮಲೀಲಾ, ವೆಂಕಟೇಶ್ ಮತ್ತಿತರರು ಇದ್ದರು.

ಚಿಕ್ಕಬಳ್ಳಾಪುರ-ಯಲಹಂಕ ಮಾರ್ಗದ ವಿದ್ಯುದೀಕರಣ ಪೂರ್ಣವಾಗಿದೆ. ಏನಾದರೂ ಸಮಸ್ಯೆಗಳು ಇವೆಯೇ ಎನ್ನುವ ಬಗ್ಗೆ ತಿಳಿಯಲು ಪರೀಕ್ಷಾರ್ಥವಾಗಿ ರೈಲು ಓಡಿಸಲಾಗಿದೆ. ನಿಗದಿತ ದಿನ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಅಭಯ್ ಕುಮಾರ್ ರಾಯ್, ರೈಲ್ವೆ ಇಲಾಖೆ ಮುಖ್ಯ ಸುರಕ್ಷಾ ಅಧಿಕಾರಿ ***** ಚಿಕ್ಕಬಳ್ಳಾಪುರ ಮತ್ತು ಯಲಹಂಕ ಮಾದರಿಯಲ್ಲಿ ಬಂಗಾರಪೇಟೆ ನಡುವಿನ ವಿದ್ಯುತ್ ಮಾರ್ಗದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು. ಗುವಾಹಟಿ, ತಿರುಪತಿ ಸೇರಿ ಬೇರೆ ಬೇರೆ ಕಡೆಗಳಿಗೂ ಇಲ್ಲಿಂದ ರೈಲು ಸಂಪರ್ಕ ಕಲ್ಪಿಸಬೇಕು. ಪುಟ್ಟಪರ್ತಿ ಮತ್ತು ಗೌರಿಬಿದನೂರು ರೈಲ್ವೆ ಮಾರ್ಗದ ಕಾಮಗಾರಿಯೂ ಆದಷ್ಟು ಬೇಗ ಪೂರ್ಣವಾಗಬೇಕು. ಸೈಯದ್ ಮಹಮ್ಮದ್, ರೈಲ್ವೆ ಹೋರಾಟ ಸಮಿತಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net