ವಿದ್ಯುತ್ ಬಿಲ್ ಬಾಕಿ ವಸೂಲಿಗೆ ಸಚಿವರಲ್ಲಿ ಮನವಿ

Ajeempeer Khadri
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸರ್ಕಾರದ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಪಾವತಿಸುವಂತೆ ಆಯಾ ಇಲಾಖೆಯ ಸಚಿವರಲ್ಲಿ ಮನವಿ ಮಾಡಲಾಗುವುದು ಹಾಗೂ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ನೂತನ ಅಧ್ಯಕ್ಷ ಸೈಯದ್ ಅಜೀಮಪೀರ್ ಖಾದ್ರಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ, ವಾಣಿಜ್ಯ, ಕೈಗಾರಿಕೆ, ನೀರಾವರಿ, ಸರ್ಕಾರಿ ಇಲಾಖೆಗಳು, ಇತ್ಯಾದಿ ಸೇರಿ 4835 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ವಸೂಲಿಯಾಗಬೇಕಿದೆ. ಹೆಸ್ಕಾಂ 2640 ಕೋಟಿ ರೂ. ನಷ್ಟದಲ್ಲಿದೆ. ಪ್ರತಿ ತಿಂಗಳು ಸರಾಸರಿ 1595.51 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದ್ದು, ಸರಾಸರಿ 1016 ಕೋಟಿ ರೂ. ಕಂದಾಯ ಬೇಡಿಕೆ ಇರುತ್ತದೆ ಎಂದು ವಿವರಿಸಿದರು.

ರೈತರಿಗೆ ಗುಣಮಟ್ಟ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ಬದ್ಧರಾಗಿದ್ದು, ವಿದ್ಯುತ್ ಪರಿವರ್ತಕ (ಟಿಸಿ) ವೈಫಲ್ಯಗೊಂಡ 24 ಗಂಟೆಗಳಲ್ಲಿ ಸರಿಪಡಿಸಲು ಪ್ರಯತ್ನ ಮಾಡಲಾಗುವುದು. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಇಲಾಖೆಯ ಕಾರ್ಯನಿರ್ವಹಣೆ ವೇಗ ಪಡೆಯಬೇಕಿದೆ. ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದರು.

ಫೋನ್ ಇನ್ ಕಾರ್ಯಕ್ರಮ

ವಿದ್ಯುತ್ ಗ್ರಾಹಕರ ಸಮಸ್ಯೆಗಳನ್ನು ಅರಿಯಲು ಫೋನ್ ಇನ್ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದೇನೆ. ನಾನೇ ಖುದ್ದಾಗಿ ನೇರವಾಗಿ ಕರೆಗಳನ್ನು ಸ್ವೀಕರಿಸಿ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ. ಮೊದಲ ಫೋನ್ ಇನ್ ಕಾರ್ಯಕ್ರಮಕ್ಕೆ ಗ್ರಾಹಕರಿಂದ ವ್ಯಕ್ತವಾಗುವ ಪ್ರತಿಕ್ರಿಯೆ ಹಾಗೂ ಸಮಸ್ಯೆಗಳ ತೀವ್ರತೆಯನ್ನು ಗಮನಿಸಿ ನಿಯಮಿತವಾಗಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net