ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

09 HANUR 2 A
ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರೈತರ ಜತೆಗೂಡಿ ಹನೂರಿನ ಸೆಸ್ಕ್ ಉಪ ವಿಭಾಗೀಯ ಕಚೇರಿ ಮುಂಭಾಗ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
Published on

ಹನೂರು: ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೋಮವಾರ ರೈತರ ಜತೆಗೂಡಿ ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿ ಮುಂದೆ ಧರಣಿ ನಡೆಸಿದರು.

ಹನೂರು ಭಾಗದ ಬಹುತೇಕ ಗ್ರಾಮಗಳು ಕಾಡಂಚಿನಲ್ಲಿದ್ದು, ಇಲ್ಲಿನ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ತಾಲೂಕು ರಚನೆಯಾಗಿ 4 ವರ್ಷ ಕಳೆದಿದೆ. ಆದರೆ ಕೃಷಿಗೆ ಅನುಕೂಲವಾಗುವಂತೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಸೆಸ್ಕ್ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ರೈತರನ್ನು ಕಡೆಗಣಿಸಿದೆ. ಬಹುತೇಕ ಗ್ರಾಮಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಇರುವುದಿಲ್ಲ. ಇದರಿಂದ ಅಡುಗೆ ಮಾಡಲು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬ ತೊಂದರೆಯಾಗಿದೆ. ಅಲ್ಲದೇ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಜತೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಸರ್ಕಾರ ಆದೇಶಿಸಿದೆ. ಆದರೆ ಅಧಿಕಾರಿಗಳು ಇದರಲ್ಲಿ ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕೃಷಿಗೆ ತೊಡುಕಾಗಿ ಪರಿಣಮಿಸಿದೆ.

ಒಂದು ವಾರದಿಂದ ತೋಟದ ಮನೆಗಳಿಗೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಪರಿಣಾಮ ಕಾಡು ಪ್ರಾಣಿಗಳ ಹಾವಳಿ ಭಯದಿಂದ ದಿನ ದೂಡುವಂತಾಗಿದೆ. ಇನ್ನು ಕೆಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದೆ. ಅಲ್ಲಲ್ಲಿ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳಿವೆ. ಜತೆಗೆ ದುರಸ್ತಿಗೊಂಡ ಟಿಸಿಯನ್ನು ಸಕಾಲಕ್ಕೆ ರಿಪೇರಿ ಮಾಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಇನ್ನು ಮುಂದಾದರೂ ಇತ್ತ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕು. ಜತೆಗೆ ಬೆಳಗ್ಗೆ ವೇಳೆ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಸ್ಥಳದಲ್ಲಿದ್ದ ಸೆಸ್ಕ್ ಎಇಇ ಶಂಕರ್ ಪ್ರತಿಕ್ರಿಯಿಸಿ, ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಯನ್ನು ಸರಿಪಡಿಸಲು ಹಾಗೂ ಹಳೆಯ ಕಬ್ಬಿಣದ ಕಂಬಗಳನ್ನು ಅಳವಡಿಸುವ ಸಂಬಂಧ ಈಗಾಗಲೇ ಕ್ರೀಯಾಯೋಜನೆ ಸಲ್ಲಿಸಿ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ. ಅನುಮೋದನೆಗೊಂಡ ಬಳಿಕ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಇಇ ವಸಂತ್‌ಕುಮಾರ್ ಮಾತನಾಡಿ, ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು. ಬೆಳಗ್ಗೆ 4 ಗಂಟೆ ತ್ರಿ ಫೇಸ್ ವಿದ್ಯುತ್ ನೀಡುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಹೆಬ್ಬಸೂರು ಬಸವಣ್ಣ, ಗೌರವಾಧ್ಯಕ್ಷ ಶಿವರಾಮ್, ತಾಲೂಕು ಅಧ್ಯಕ್ಷ ಗೌಡೇಗೌಡ, ಪದಾಧಿಕಾರಿಗಳಾದ ಬಸವರಾಜು, ಲೋಕೇಶ್, ಪಳನಿಸ್ವಾಮಿ, ವೇಲುಸ್ವಾಮಿ, ರಾಜಣ್ಣ, ಮಹದೇವ, ಕನಕಮ್ಮ, ಮಾಹಿಯಮ್ಮ, ಪೂಂಗುಡಿ ಸೇರಿದಂತೆ ಕಾಂಚಳ್ಳಿ, ಗುಂಡಾಪುರ, ಪುದು ರಾಮಾಪುರ, ಅಜ್ಜೀಪುರ, ಪಚ್ಚೆದೊಡ್ಡಿ, ದೊಮ್ಮನಗದ್ದೆ, ಪಳನಿಮೇಡು, ನಾಗಣ್ಣನಗರ, ಉದ್ದನೂರು ಸೇರಿದಂತೆ ಇನ್ನಿತರೆ ಗ್ರಾಮದ 300ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net