ವಿದ್ಯುತ್‌, ನೀರು ವ್ಯತ್ಯಯವಾಗದಂತೆ ನೋಡಿಕೊಳ್ಳಿ

17 ckm 2
ಚಿಕ್ಕಮಗಳೂರಿನ ಕೈಗಾರಿಕಾ ಪ್ರದೇಶದ ಮಾಲೀಕರು ಹಾಗೂ ಬಾಡಿಗೆದಾರರು ಶಾಸಕ ಎಚ್‌.ಡಿ.ತಮ್ಮಯ್ಯ ಅವರನ್ನು ಅಭಿನಂದಿಸಿದರು.
Published on

ಚಿಕ್ಕಮಗಳೂರು: ಚಿಕ್ಕಮಗಳೂರಿನ ಅಂಬಳೆ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಹೊರವಲಯದ ಅಂಬಳೆ ಕೆಐಎಡಿಬಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ನಿರಂತರ ವಿದ್ಯುತ್ ಮತ್ತು ನೀರು ಸರಬರಾಜು ವ್ಯತ್ಯಯವಾಗುತ್ತಿದೆ. ಇದರಿಂದ ಇಲ್ಲಿರುವ ಕಾರ್ಖಾನೆಗಳ ಕಾರ್ಯ ನಿರ್ವಹಣೆ ಅಸಾಧ್ಯವಾಗುತ್ತಿದ್ದು ಶಾಸಕರು ಮಧ್ಯಪ್ರವೇಶಿಸಿ ಕೈಗಾರಿಕಾ ಪ್ರದೇಶಕ್ಕೆ ದಿನದ ೨೪ ಗಂಟೆಗಳಲ್ಲೂ ವಿದ್ಯುತ್ ಮತ್ತು ನೀರು ಸರಬರಾಜಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಇಂಡಸ್ಟ್ರಿಯಲ್ ಏರಿಯಾ ಮಾಲೀಕರು ಮತ್ತು ಬಾಡಿಗೆದಾರರ ಸಂಘದ ಪದಾಧಿಕಾರಿಗಳು ಶಾಸಕ ಎಚ್.ಡಿ.ತಮ್ಮಯ್ಯ ಅವರನ್ನು ಅವರ ಕಛೇರಿಯಲ್ಲಿ ಭೇಟಿ ಮಾಡಿ ಒತ್ತಾಯಿಸಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸ್ಥಳದಲ್ಲೇ ಈ ಸೂಚನೆ ನೀಡಿದರು.

ಕಾರ್ಖಾನೆಗಳಿಂದ ಅನೇಕರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ. ವಿದ್ಯುತ್ ಮತ್ತು ನೀರಿನ ಸರಬರಾಜಿನಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಕಾರ್ಖಾನೆಗಳು ಸುಗಮವಾಗಿ ನಡೆಯಲು ವಿದ್ಯುತ್ ಸರಬರಾಜು ಅತ್ಯಂತ ಅವಶ್ಯಕವಾಗಿದೆ. ಆದುದ್ದರಿಂದ ಇನ್ನೂ ಮುಂದೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವುದು ಮೆಸ್ಕಾ ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.

ಸಂಘದ ಅಧ್ಯಕ್ಷ ಜಿ.ಸುರೇಂದ್ರ ಶೆಟ್ಟಿ,ಕಾರ್ಯದರ್ಶಿ ಕೆ.ಎನ್.ಮಂಜುರಾಜ್ ಅರಸ್,ಜಂಟಿ ಕಾರ್ಯದರ್ಶಿ ಎಸ್.ಸೋಮಶೇಖರ್ ಮತ್ತು ವಿ.ಪಿ ಕೃಷ್ಣೇಗೌಡ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net