

ಮೈಸೂರು: ವಿದ್ಯುತ್ ದರ ಏರಿಕೆ, ಗೋಹತ್ಯೆ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ನಗರ ಮತ್ತು ಗ್ರಾಮಾಂತರ ಕಾರ್ಯಕರ್ತರು ಮಂಗಳವಾರವೂ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಆರ್‌ಟಿಒ ವೃತ್ತದ ಬಳಿಯಿರುವ ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಗೂ ಮುನ್ನ ಎಲ್ಲರಿಗೂ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವುದಾಗಿ ಗ್ಯಾರಂಟಿ ಕಾರ್ಡ್ ನೀಡಿದ್ದ ಕಾಂಗ್ರೆಸ್, ಈಗ ದಿನಕ್ಕೊಂದು ಷರತ್ತು ವಿಧಿಸುತ್ತಿದೆ. ಎಲ್ಲರಿಗೂ 200 ಯೂನಿಟ್ ವಿದ್ಯುತ್ ಎಂದು ಹೇಳಿ ಈಗ ಸರಾಸರಿ ಎನ್ನುತ್ತಿದೆ. ಇದರಿಂದ ಜನರಿಗೆ ಕೇವಲ 80 ಯೂನಿಟ್ ನೀಡಲು ಮುಂದಾಗಿದೆ. ವಾರ್ಷಿಕ ಸರಾಸರಿ ಬಳಕೆಯ ಮೇಲೆ ಶೇ.10ರಷ್ಟು ಉಚಿತವಾಗಿ ನೀಡುವುದಾಗಿ ಹೇಳಿದೆ. ಸರ್ಕಾರ ಕೂಡಲೇ ಈ ಮೋಸ ನಿಲ್ಲಿಸಬೇಕು. ಗ್ಯಾರಂಟಿಯಲ್ಲಿ ಹೇಳಿದಂತೆ 200 ಯೂನಿಟ್ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇನೆ ಎಂದು ಹೇಳಿ ಇದೀಗ ಷರತ್ತುಗಳನ್ನು ವಿಧಿಸುತ್ತಿದೆ. ಒಂದೇ ಹೆಸರಿನಲ್ಲಿ ಹಲವಾರು ಆರ್‌ಆರ್ ನಂಬರ್‌ಗಳಿದ್ದರೆ ಒಂದು ಆರ್‌ಆರ್ ನಂಬರ್‌ಗೆ ಮಾತ್ರ ಉಚಿತ ವಿದ್ಯುತ್ ಯೋಜನೆ ಅನ್ವಯವಾಗಲಿದೆ ಎಂಬ ಸರ್ಕಾರದ ನಿಲುವು ಸರಿಯಲ್ಲ ಎಂದರು.
ಬಾಡಿಗೆದಾರರಿಗೆ ಗ್ಯಾರಂಟಿ ಯೋಜನೆ ಅನ್ವಯ ಆಗುವುದಿಲ್ಲ ಎನ್ನುವುದು ಖಂಡನೀಯ. ಉಚಿತ ವಿದ್ಯುತ್ ಯೋಜನೆ ಎಲ್ಲರಿಗೂ ಸಿಗುವಂತಾಗಬೇಕು. ಅಲ್ಲದೆ ವಿದ್ಯುತ್ ಏರಿಕೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಗೋಹತ್ಯೆ ನಿಷೇಧ ಕಾಯ್ದೆಗೆ ಯಾವುದೇ ತಿದ್ದುಪಡಿ ಮಾಡಬಾರದು. ಅಲ್ಲಿಯವರೆಗೂ ಬಿಜೆಪಿಯ ಪ್ರತಿಭಟನೆ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ಮೇಯರ್ ಶಿವಕುಮಾರ್, ಮಾಜಿ ಎಂಲ್‌ಸಿ ತೋಂಟದಾರ್ಯ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಮಾ.ವಿ. ರಾಂಪ್ರಸಾದ್, ಎ.ಕೆ. ಸುಬ್ಬಯ್ಯ, ಮಾಜಿ ಮೇಯರ್ ಸುನಂದಾ ಪಾಲನೇತ್ರ, ಮುಖಂಡರಾದ ಅಪ್ಪಣ್ಣ, ಗಿರಿಧರ್, ಡಾ.ವಸಂತ್‌ಕುಮಾರ್, ಮಹೇಶ್, ಮಹೇಶ್‌ರಾಜೇ ಅರಸ್ ಇತರರು ಇದ್ದರು.