

ಮೈಸೂರು: ವಿದ್ಯುತ್ ದರ ಏರಿಕೆ ಮಾಡಬಾರದು. ಈಗಾಗಲೇ ಆಗಿರುವ ಲೋಪವನ್ನು ಸರಿಪಡಿಸಬೇಕು ಎಂದು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷರೂ ಆದ ಮಾಜಿ ಶಾಸಕ ವಾಸು ಆಗ್ರಹಿಸಿದರು.
ರೈತರು, ಮೊದಲಾದವರಿಗೆ ನೀಡುವ ವಿದ್ಯುತ್‌ನ ಸಬ್ಸಿಡಿಯನ್ನು ಸರ್ಕಾರ ಭರಿಸಬೇಕು. ಆದರೆ ಆ ರೀತಿ ಮಾಡುತ್ತಿಲ್ಲ. ವಿದ್ಯುತ್ ಕಳ್ಳತನವಾಗಿದ್ದು, ನಷ್ಟವಾಗಿದೆ ಎಂದು ಕಾರಣ ನೀಡುತ್ತಿದೆ. ನಷ್ಟವನ್ನು ಸರಿದೂಗಿಸಿಕೊಳ್ಳಲು ಕೈಗಾರಿಕೆಗಳು ಹಾಗೂ ಇನ್ನಿತರ ವಿದ್ಯುತ್ ಬಳಕೆದಾರರ ಮೇಲೆ ವಿದ್ಯುತ್ ದರ ಏರಿಕೆ ಹೊರೆ ಹೇರಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಪದೇ ಪದೆ ಕೈಗಾರಿಕೆಗಳ ವಿದ್ಯುತ್ ದರ ಏರಿಸಲಾಗುತ್ತಿದೆ. ಪರಿಣಾಮ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಹೊರೆಯಾಗುತ್ತಿದ್ದು, ಮುಚ್ಚುವ ಹಂತ ತಲುಪಿವೆ ಎಂದು ಹೇಳಿದರು.
ವಿದ್ಯುತ್ ದರ ಏರಿಕೆ ಪ್ರಸ್ತಾವನೆ ಕುರಿತಂತೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಫೆ.15ರಂದು ಸಭೆ ನಡೆಯಲಿದ್ದು, ಈ ವೇಳೆ ಕೈಗಾರಿಕೆಗಳು ದರ ಏರಿಕೆ ವಿರೋಧಿಸಲಿವೆ. ಆದರೆ ಈ ಹಿಂದೆಯೂ ಈ ರೀತಿ ಆಕ್ಷೇಪಣೆ ಸಲ್ಲಿಸಿದ್ದರೂ ಗಮನಿಸದೇ ದರ ಏರಿಸಲಾಗುತ್ತಿದೆ. ದೊಡ್ಡ ಕೈಗಾರಿಕೆಗಳಿಗೆ ಆಗಾಗ್ಗೆ ರಿಯಾಯಿತಿ ನೀಡುತ್ತಿರುವ ಸರ್ಕಾರ, ಸಣ್ಣ ಕೈಗಾರಿಕೆಗಳನ್ನು ಮರೆತಿದೆ. ಇದು ಸರಿಯಲ್ಲ ಎಂದು ಹೇಳಿದರು.