

ಸಕಲೇಶಪುರ : ವಿದ್ಯುತ್ ದರ ಏರಿಕೆ ಖಂಡಿಸಿ ತಾಲೂಕಿನ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರ ಸಂಘದ ವತಿಯಿಂದ ಪಟ್ಟಣದ ಸೆಸ್ಕ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನಲ್ಲಿ ಪ್ರವಾಸೋದ್ಯಮ ವೇಗಗತಿಯಲ್ಲಿದ್ದು ರೆಸಾರ್ಟ್ ಹಾಗೂ ಹೋಂ ಸ್ಟೇಗಳು ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೆಲಸ ಒದಗಿಸುವ ಮೂಲಕ ನಿರುದ್ಯೋಗ ನಿವಾರಣೆಗೆ ಸಹಕಾರಿಯಾಗಿವೆ. ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳ ವಿದ್ಯುತ್ ದರವನ್ನು ಶೇ.20 ರಿಂದ 60 ರಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಸಂಕಷ್ಟದಲ್ಲಿರುವ ಸಾಕಷ್ಟು ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ಬಾಗಿಲು ಮುಚ್ಚುವ ಸ್ಥಿತಿ ಬಂದೊದಗಿದೆ. ಉಚಿತ ವಿದ್ಯುತ್ ನೀಡುವ ಯೋಜನೆಗೆ ಹಣ ಹೊಂದಿಸಲು ಉದ್ಯಮಗಳ ಮೇಲೆ ದರ ಏರಿಕೆ ಮಾಡುವುದು ಸರಿಯಲ್ಲ. ಇದರಿಂದಾಗಿ ಸಣ್ಣ, ಮಧ್ಯಮ ಗಾತ್ರದ ಉದ್ಯಮಗಳು ಬಾಗಿಲು ಮುಚ್ಚುವಂತಾಗುತ್ತಿದೆ. ಆದ್ದರಿಂದ ಪರಿಷ್ಕರಣೆಗೊಂಡಿರುವ ವಿದ್ಯುತ್ ಬಿಲ್ ಅನ್ನು ಯಾವುದೇ ಕಾರಣಕ್ಕೂ ನಾವು ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಮಾಸ್ತರೆ ಲೋಕೇಶ್, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಹರೀಶ್, ರವಿಶಂಕರ್, ಕೇಶವ, ವಿನಯ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
23 ಎಸ್‌ಕೆಪಿಪಿ 1 ವಿದ್ಯುತ್ ದರ ಏರಿಕೆ ಖಂಡಿಸಿ ತಾಲೂಕು ರೆಸಾರ್ಟ್ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.