

ಕುಶಾಲನಗರ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿರುವುದನ್ನು ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನಗರ ಘಟಕದ ಆಶ್ರಯದಲ್ಲಿ ಗಣಪತಿ ದೇವಾಲಯದ ಮುಂದೆ ಪ್ರತಿಭಟಿಸಿದ ಬಿಜೆಪಿಗರು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರ ಬಿಜೆಪಿ ಅಧ್ಯಕ್ಷ ವಿ.ಎನ್. ಉಮಾಶಂಕರ್ ಮಾತನಾಡಿ, ಉಚಿತ ಘೋಷಣೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಅಧಿಕಾರ ಹಿಡಿದ ಕಾಂಗ್ರೆಸ್, ಇದೀಗ ಅಧಿಕಾರಕ್ಕೆ ಬಂದ ನಂತರ ಘೋಷಣೆಗಳನ್ನು ಜಾರಿಗೊಳಿಸಲು ಷರತ್ತುಗಳನ್ನು ವಿಧಿಸುತ್ತಿರುವುದು ಖಂಡನೀಯ. ಉಚಿತ ಎಂದ ಮೇಲೆ ಕಂಡೀಷನ್ ರಹಿತವಾಗಿ ಎಲ್ಲರಿಗೂ ಜಾರಿಗೊಳಿಸಬೇಕಿದೆ ಎಂದರು.
ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಮೋಸ ಹೋದ ಮತದಾರರು ಬಿಜೆಪಿಯ ಕೈ ಹಿಡಿಯಲಿದ್ದಾರೆ. ಬಿಜೆಪಿ ಖಂಡಿತವಾಗಿ ಕಾಂಗ್ರೆಸ್‌ಗಿಂತ ಮೇಲುಗೈ ಸಾಧಿಸಲಿದೆ ಎಂದರು.
ಮತ್ತೊಬ್ಬ ಹಿರಿಯ ಮುಖಂಡ ಜಿ.ಎಲ್. ನಾಗರಾಜ್ ಮಾತನಾಡಿ, ಅಧಿಕಾರಕ್ಕೆ ಬಂದ 15 ದಿನಗಳಲ್ಲಿ ಒಂದು ಸರ್ಕಾರದ ವಿರುದ್ಧ ಹೋರಾಟಗಳು ಪ್ರಾರಂಭವಾಗುತ್ತವೆ ಎಂದರೆ ಅದು ನಾಚಿಗೆಗೇಡು. ನೈಜ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಲಭಿಸಲಿದೆ. ಅಭಿವೃದ್ಧಿ ಯೋಜನೆಗಳು ಉಳ್ಳವರ ಪಾಲಾಗದಂತೆ, ಚುನಾವಣಾ ಮುನ್ನ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕಿದೆ ಎಂದರು.
ಕುಡಾ ಮಾಜಿ ಅಧ್ಯಕ್ಷ ಎಂ.ಎಂ. ಚರಣ್, ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ವಕ್ತಾರ ಕೆ.ಜಿ. ಮನು, ಪುರಸಭೆ ಸದಸ್ಯರಾದ ಡಿ.ಕೆ. ತಿಮ್ಮಪ್ಪ, ರೂಪಾ ಉಮಾಶಂಕರ್, ಶೈಲ ಕೃಷ್ಣಪ್ಪ, ಕೂಡು ಮಂಗಳೂರು ಗ್ರಾಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಪ್ರಮುಖರಾದ ನವನೀತ್, ಮಧುಸೂದನ್, ಪ್ರವೀಣ್, ಚಂದ್ರಶೇಖರ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಬಿ.ಜೆ. ಅಣ್ಣಯ್ಯ, ಆದರ್ಶ್, ಸುಮನ್ ಮತ್ತಿತರರು ಇದ್ದರು.