

ಮೈಸೂರು: ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ನಗರ ಮತ್ತು ಗ್ರಾಮಾಂತರ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ನ್ಯಾಯಾಲಯದ ಗಾಂಧಿ ಪುತ್ಥಳಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಘೋಷಣೆ ಕೂಗಿದರು.
ವಿದ್ಯುತ್ ದರ ಹೆಚ್ಚಿಸದಿರುವಂತೆ ಭಿತ್ತಿಪತ್ರ ಪ್ರದರ್ಶಿಸಿ ಗಮನಸೆಳೆದರು. 200 ಯೂನಿಟ್ ವಿದ್ಯುತ್ ಉಚಿತ ಕೊಡುವುದಾಗಿ ಹೇಳಿ 80 ಯೂನಿಟ್ ಕೊಟ್ಟಿದ್ದಾರೆ. ಈ ಮೋಸವನ್ನು ನಿಲ್ಲಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆ ಮುಂದುರಿಸಬೇಕು. ಹಾಲಿನ ಪ್ರೋತ್ಸಾಹ ಧನ ಕಡಿತ ಮಾಡಬಾರದು ಎಂದು ಒತ್ತಾಯಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಚುನಾವಣಾ ಭಾಷಣದಲ್ಲಿ ಸಿದ್ದರಾಮಯ್ಯ ಅವರು ನಂಗೂ ನಿಂಗೂ ಫ್ರಿ ಎನ್ನುತ್ತಿದ್ದರು. ಈಗ ಷರತ್ತು ವಿಧಿಸಿದ್ದಾರೆ. ಇದು ಹೇಳುವುದೊಂದು, ಮಾಡುವುದೊಂದು ಎಂಬಂತಾಗಿದೆ ಎಂದು ಟೀಕಿಸಿದರು.
ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಬಳಿಕ ಹಿಂದುಗಳು ಪೂಜೆ ಮಾಡುವ ಗೋ ರಕ್ಷಣೆ ಕಾಯ್ದೆ ಹಿಂಪಡೆಯುವ ಹೇಳಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು
ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಮಾತನಾಡಿ, ಸ್ಪಷ್ಟ ಬಹುಮತ ಕೊಟ್ಟ ಮತದಾರರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ಜನರಿಗೆ ಟೋಪಿ ಹಾಕಿದೆ. ಇತರ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಗ್ಯಾರಂಟಿ ಭರವಸೆಯನ್ನು ಈಡೇರಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮಾಜಿ ಶಾಸಕ ಎಲ್.ನಾಗೇಂದ್ರ, ಮುಖಂಡರಾದ ಕವೀಶ್‌ಗೌಡ, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡರಾದ ಮೈ.ವಿ.ರವಿಶಂಕರ್, ಸಂದೇಶ್ ಸ್ವಾಮಿ, ಗಿರಿಧರ್, ಜಯಪ್ರಕಾಶ್ (ಜೆಪಿ) ಸೇರಿದಂತೆ ಇತರರಿದ್ದರು