ವಿದ್ಯುತ್ ದರ ಇಳಿಕೆಗೆ ಹೋಟೆಲ್ ಮಾಲೀಕರ ಆಗ್ರಹ

Published on

ಮೈಸೂರು: ರಾಜ್ಯ ಸರ್ಕಾರ ಇತ್ತೀಚೆಗೆ ಏರಿಕೆ ಮಾಡಿರುವ ವಿದ್ಯುತ್ ದರ ಏರಿಕೆಯಿಂದ ಗೃಹ ಬಳಕೆ ಜೊತೆಗೆ ವಾಣಿಜ್ಯ ಬಳಕೆಗೆ ದುಬಾರಿ ಅಗಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದ್ದಾರೆ.
ನಿಗದಿತ ಶುಲ್ಕ ಶೇ.60, ಒಂದು ಯುನಿಟ್‌ಗೆ ಹೆಚ್ಚಿಸಿದ ಶುಲ್ಕ 2.42 ರೂ., ನಿಗದಿತ ಶುಲ್ಕ ಒಂದು ಕಿಲೋ ವ್ಯಾಟ್‌ಗೆ 85 ರೂ., ಇಂಧನ ಹೊಂದಾಣಿಕೆ ಶುಲ್ಕ, ಹೆಚ್ಚುವರಿ ಠೇವಣಿ ಸೇರಿ ಸರಾಸರಿ ಶೇ. 40ರಷ್ಟು ಶುಲ್ಕ ಏರಿಕೆ ಮಾಡಿರುವುದು ಆತಂಕಕಾರಿ ಅಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇವಲ ವಿದ್ಯುತ್ ಶುಲ್ಕವನ್ನು ಒಂದು ಯುನಿಟ್‌ಗೆ 40 ಪೈಸೆಯಿಂದ 50 ಪೈಸೆಗೆ ಹೆಚ್ಚಿಸಿದ್ದರೆ ಯಾರ ವಿರೋಧ ಇರುತ್ತಿರಲಿಲ್ಲ. ಆದರೆ ವಾಣಿಜ್ಯ ವಹಿವಾಟಿಗೆ ವಿವಿಧ ರೀತಿಯ ದುಬಾರಿ ಶುಲ್ಕ ವಿಧಿಸಲಾಗಿದೆ. ಕೇಲವು ಸಂಪರ್ಕಗಳಿಗೆ ಕಳೆದ ತಿಂಗಳ ಬಿಲ್ಲು ನೋಡಿದಾಗ ಶೇ.60ರಷ್ಟು ಹೆಚ್ಚಿಸಿರುವುದು ಕಂಡು ಬರುತ್ತಿದೆ ಎಂದಿದ್ದಾರೆ.
ಆದ್ದರಿಂದ ಈಗ ಹೆಚ್ಚಿಸಿರುವ ನಿಗದಿತ ಶುಲ್ಕ 290 ರೂ.ರಿಂದ 375 ರೂ. ಹಾಗೂ ಇಂಧನ ಹೊಂದಾಣಿಕೆ ಶುಲ್ಕ ಕೈ ಬಿಡಬೇಕು ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net