

ಹುಬ್ಬಳ್ಳಿ: ವಿದ್ಯುತ್ ದರ ಏರಿಕೆ ಮಾಡಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ)ದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ದರ ಇಳಿಕೆಗೆ ಆಯೋಗಕ್ಕೆ 7 ದಿನಗಳ ಗಡುವು ನೀಡಿದೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಇದೇ ಮೊದಲ ಬಾರಿಗೆ ಎಸ್ಕಾಂ (ವಿದ್ಯುತ್ ಸರಬರಾಜು ಕಂಪನಿ)ಗಳು ಕೇಳಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿ ಕೆಇಆರ್ಸಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಪ್ರಮಾಣದ ಏರಿಕೆಯ ವಿದ್ಯುತ್ ಬಿಲ್ ಪಾವತಿಸಲು ವ್ಯಾಪಾರಸ್ಥರಿಗೆ, ಕೈಗಾರಿಕೋದ್ಯಮಿಗಳಿಗೆ ಸಾಧ್ಯವಿಲ್ಲ. ಏರಿಕೆಗೆ ಅನುಗುಣವಾಗಿ ಈಗಾಗಲೇ ಸೃಜಿಸಲಾಗಿರುವ ಬಿಲ್ ಮೊತ್ತದಲ್ಲಿ ಶೇ. 75 ರಷ್ಟು ಮೊತ್ತವನ್ನು ಪಾವತಿಸಲು ಕೈಗಾರಿಕೊದ್ಯಮಿಗಳು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಮುಂದಿನ 7 ದಿನಗಳಲ್ಲಿ ಕೆಇಆರ್ಸಿ ವಿದ್ಯುತ್ ದರ ಇಳಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ಕೈಗಾರಿಕೆಗಳನ್ನು ಬಂದ್ ಮಾಡುವ ಬಗ್ಗೆಯೂ ರ್ಚಚಿಸುತ್ತೇವೆ. ಧಾರವಾಡ ಜಿಲ್ಲಾಧಿಕಾರಿ ಹಾಗೂ ಹೆಸ್ಕಾಂ ಎಂಡಿ ಅವರನ್ನು ಭೇಟಿ ಮಾಡಿ ನಮ್ಮ ಬೇಡಿಕೆಯನ್ನು ಸಲ್ಲಿಸುತ್ತೇವೆ. ಎಸ್ಕಾಂಗಳು ಕೇಳಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದರಿಂದ ಕಾನೂನು ಹೋರಾಟ ಮಾಡುವುದಕ್ಕೂ ಅವಕಾಶಗಳಿವೆ ಎಂದರು.