

ಯಳಂದೂರು: ಪಟ್ಟಣದ ಹೊನ್ನೂರು ರಸ್ತೆಯ ಬಳಿ ಇರುವ ಕಬ್ಬಿನ ಗದ್ದೆಗಳಿಗೆ ಭಾನುವಾರ ಮಧ್ಯಾಹ್ನ ವಿದ್ಯುತ್ ತಂತಿ ತಗುಲಿದ ಪರಿಣಾಮ 3 ಎಕರೆಗೂ ಹೆಚ್ಚಿನ ಕಟಾವಿಗೆ ಬಂದಿದ್ದ ಕಬ್ಬು ಸುಟ್ಟು ಭಸ್ಮವಾಗಿದೆ.
ಕೃಷ್ಣ, ಉಮೇಶ ಹಾಗೂ ಶಶಿಧರ್ ಎಂಬುವರ ಕಬ್ಬು ಇದಾಗಿದೆ. ಭಾನುವಾರ ಮಧ್ಯಾಹ್ನ ವಿದ್ಯುತ್ ತಂತಿಗಳಿಂದ ಬೆಂಕಿಯ ಕಿಡಿಗಳು ಕಾಣಿಸಿಕೊಂಡು ಕಬ್ಬಿನ ಸೋಗಿಗೆ ಸೋಕಿದೆ. ನಂತರ ಇಡೀ ಕಬ್ಬಿನ ಗದ್ದೆಗೆ ಬೆಂಕಿ ಆವರಿಸಿದೆ. ಕೂಡಲೇ ಸೆಸ್ಕ್‌ಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಂತರ ರೈತರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೂ ಬೆಂಕಿ ತಹಬದಿಗೆ ಬಂದಿಲ್ಲ. ನಂತರ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದು, ಅಕ್ಕಪಕ್ಕದಲ್ಲಿದ್ದ ಕಬ್ಬಿನ ಗದ್ದೆಗೆ ಬೆಂಕಿ ಆವರಿಸದಂತೆ ತಡೆದಿದ್ದಾರೆ.
ಸೆಸ್ಕ್ ನಿರ್ಲಕ್ಷ್ಯವೇ ಕಾರಣ: ಇಲ್ಲಿರುವ ವಿದ್ಯುತ್ ಕಂಬ ವಾಲಿದ್ದು, ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇದನ್ನು ದುರಸ್ತಿ ಮಾಡುವಂತೆ ಕಳೆದ ಮೂರು ತಿಂಗಳಿಂದಲೂ ಸೆಸ್ಕ್‌ಗೆ ದೂರು ಸಲ್ಲಿಸಿದ್ದರೂ ಅವರು ಕ್ರಮ ವಹಿಸಿಲ್ಲ. ಇದು ಬೆಂಕಿ ಆವರಿಸಲು ಪ್ರಮುಖ ಕಾರಣವಾಗಿದೆ. ಭಾನುವಾರ ಹೊತ್ತಿಕೊಂಡ ಬೆಂಕಿಗೆ ತಂತಿಗಳಿಂದ ಸಿಡಿದ ಕಿಡಿಗಳೇ ಕಾರಣವಾಗಿದೆ. ಕೂಡಲೇ ಇದನ್ನು ದುರಸ್ತಿ ಮಾಡಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.