

ಕೆ.ಆರ್.ಪೇಟೆ: ಹೊಸಹೊಳಲಿನಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ವೇಳೆ ಮಣ್ಣು ಸುರಿಯುತ್ತಿದ್ದ ಟಿಪ್ಪರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಪ್ರವಹಿಸಿದ ಪರಿಣಾಮ ಕ್ಲೀನರ್ ಮೃತಪಟ್ಟಿದ್ದಾನೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಕಾಂತಪ್ಪ(35) ಮೃತಪಟ್ಟ ಟಿಪ್ಪರ್ ಕ್ಲೀನರ್. ಹೊಸಹೊಳಲು ಚಿಕ್ಕಕರೆಯನ್ನು 10 ಕೋಟಿ ರೂ.ವೆಚ್ಚದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆ ಅಭಿವೃದ್ಧಿಗೊಳಿಸಿ ಪ್ರವಾಸಿ ಕೇಂದ್ರವನ್ನಾಗಿಸಲು ಯೋಜಿಸಲಾಗಿದೆ. ಕೆರೆಯ ಎರಡೂ ಬದಿಯಲ್ಲಿ ವಾಕಿಂಗ್ ಪಾತ್ ನಿರ್ಮಾಣ, ಕೆರೆಯೊಳಗೆ ಕೃತಕ ನಡುಗಡ್ಡೆಗಳನ್ನು ನಿರ್ಮಿಸಿ ಬೋಟಿಂಗ್ ಮತ್ತಿತರ ಪ್ರವಾಸಿ ಆಕರ್ಷಕ ತಾಣವನ್ನಾಗಿಸಲು ಯೋಜಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿಯುವ ಮುನ್ನವೇ ಕಾಮಗಾರಿ ಆರಂಭಿಸಿದ ಕಾರಣ ವಿವಾದಕ್ಕೆ ಒಳಗಾಗಿ ಕೆಲವು ಕಾಲ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಆನಂತರ ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ನಡೆದು ಅಮೃತ ಕನ್‌ಸ್ಟ್ರಕ್ಷನ್ ಕಂಪನಿ ಕಾಮಗಾರಿ ಆರಂಭಿಸಿತ್ತು. ವಾಕಿಂಗ್ ಪಾತ್ ನಿರ್ಮಿಸಲು ಮಣ್ಣನ್ನು ಟಿಪ್ಪರ್‌ನಿಂದ ತಂದು ಕೆಳಗೆ ಸುರಿಯುವುದಕ್ಕಾಗಿ ಚಾಲಕ ಟಿಪ್ಪರ್ ಲಿಫ್ಟ್ ಎತ್ತಿದ್ದಾನೆ. ಈ ಸಂದರ್ಭದಲ್ಲಿ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಚಾಲಕ ಗಮನಿಸದೆ ಲಿಫ್ಟ್ ಎತ್ತಿದ ಪರಿಣಾಮ ಟಿಪ್ಪರ್‌ಗೆ ವಿದ್ಯುತ್ ಪ್ರವಹಿಸಿದೆ. ಇದರ ಅರಿವಿಲ್ಲದೆ ಕಾಂತಪ್ಪ ಟಿಪ್ಪರ್ ಮುಟ್ಟಿದ್ದಾನೆ. ಕಬ್ಬಿಣದ ಟಿಪ್ಪರ್ ಮುಟ್ಟಿದ ಕೂಡಲೇ ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಜ್ಞಾಹೀನನಾಗಿದ್ದಾನೆ. ತಕ್ಷಣವೇ ಆತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಚಾಲಕ ಸಾವಿನ ದವಡೆಯಿಂದ ಬದುಕುಳಿದಿದ್ದಾನೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ.