ವಿದ್ಯುತ್ ತಂತಿ ತಗುಲಿ ಇಬ್ಬರು ರೈತರ ದುರ್ಮರಣ

24rajesh7
Published on

ಚಾಮರಾಜನಗರ: ಮಳೆಯ ಹೊಡೆತ, ವಿದ್ಯುತ್ ಕಂಬ ಮತ್ತು ವಿದ್ಯುತ್ ತಂತಿಯ ನಿರ್ವಹಣೆಯ ನಿರ್ಲಕ್ಷ್ಯಕ್ಕೆ ಇಬ್ಬರು ರೈತರು ಭೀಕರವಾಗಿ ಬಲಿಯಾಗಿದ್ದಾರೆ. ಒಬ್ಬ ಮೃತ ರೈತನ ಮಗ ತನ್ನ ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತಾಲೂಕಿನ ಅಯ್ಯನಪುರ ಗ್ರಾಮದ ರೈತರಾದ ಮಲ್ಲೇಶ್(48) ಮತ್ತು ನಾಗೇಂದ್ರ(40) ಮೃತರು. ನಾಗೇಂದ್ರ ಅವರ ಮಗ ಪ್ರದೀಪ್(18) ಮನನೊಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ವಿವರ: ರೈತರಾದ ನಾಗೇಂದ್ರ ಮತ್ತು ಮಲ್ಲೇಶ್ ಬುಧವಾರ ರಾತ್ರಿ ಅಯ್ಯನಪುರ-ಇತ್ತಲಗುಡ್ಡ ಮಾರ್ಗದಲ್ಲಿರುವ ಜಮೀನಿಗೆ ಹೋಗಿ ವಾಪಸಾಗುತ್ತಿದ್ದರು. ಈ ಸಂದರ್ಭದಲ್ಲಿ ಮಳೆ ಸುರಿಯುತ್ತಿತ್ತು. ಪರಿಣಾಮ ಮುಖ್ಯರಸ್ತೆಯ ತಿರುವಿನಲ್ಲಿರುವ ಮೂರು ವಿದ್ಯುತ್ ಕಂಬಗಳಲ್ಲಿ ಹಳೆಯದಾದ ಒಂದು ವಿದ್ಯುತ್ ಕಂಬದಿಂದ ತಂತಿ ಕಿತ್ತು ಹೋಗಿ, ಹೊಸ ಎರಡು ಕಂಬಗಳ ಮಧ್ಯೆ ರಸ್ತೆಯಲ್ಲಿ ಜೋತಾಡುತ್ತಿತ್ತು. ಕತ್ತಲಿನಲ್ಲಿ ಇದನ್ನು ಗಮನಿಸಲಾಗದ ಮಲ್ಲೇಶ್ ಮತ್ತು ನಾಗೇಂದ್ರ ಬೈಕ್‌ನಲ್ಲಿ ಮುಂದೆ ಸಾಗಿದಾಗ ಕತ್ತಿಗೆ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದಿದೆ. ಬೈಕ್ ಮುಂದೆ ಚಲಿಸಿ ಬಿದ್ದು ಹೋಗಿದೆ. ಇವರಿಬ್ಬರು ವಿದ್ಯುತ್ ತಂತಿಗೆ ತಗುಲಿ ಒದ್ದಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಭೀಕರ ಸಾವು: ಜೋತು ಬಿದ್ದಿದ್ದ ತಂತಿ ಮಧ್ಯೆ ಕತ್ತು ಇಟ್ಟಿದ್ದ ಸ್ಥಿತಿಯಲ್ಲೇ ನಾಗೇಂದ್ರ ಜೀವ ಹೋಗಿತ್ತು. ವಿದ್ಯುತ್ ಶಾಕ್‌ಗೆ ಕತ್ತಿನ ಭಾಗ ಸೀಳಿ ಹೋಗಿತ್ತು. ಇಬ್ಬರ ಕಿವಿಗಳಿಂದಲೂ ರಕ್ತ ಬಂದಿತ್ತು. ಮೃತದೇಹಗಳು ಒಣಗಿ ಹೋದ ಶವಗಳಂತೆ ಕಾಣುತ್ತಿದ್ದವು. ಈ ಭೀಕರ ಸಾವನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗುರುವಾರ ಮುಂಜಾನೆ ಅವಘಡ ತಿಳಿದುಬಂದಿದೆ. ಮೃತ ನಾಗೇಂದ್ರಗೆ ತಾಯಿ, ಪತ್ನಿ, ಇಬ್ಬರು ಪುತ್ರರಿದ್ದಾರೆ. ಮಲ್ಲೇಶ್‌ಗೆ ತಾಯಿ, ಪತ್ನಿ, ಇಬ್ಬರು ಪುತ್ರರಿದ್ದಾರೆ. ಮೃತರ ಮನೆಯಲ್ಲಿ ದುಃಖ ಸ್ಫೋಟಗೊಂಡಿತ್ತು.

ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ನ್ಯಾಯ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿ, ಶವ ಪರೀಕ್ಷೆಗಾಗಿ ಮೃತದೇಹಗಳನ್ನು ಸ್ಥಳದಿಂದ ಕೊಂಡೊಯ್ಯಲು ಬಿಡಲಿಲ್ಲ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿದರು. ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಪ್ರದೀಪ್ ಮತ್ತು ಸಿಬ್ಬಂದಿ ಸ್ಥಳದಲ್ಲಿ ಇದ್ದರು. ಡಿಸಿ ಶಿಲ್ಪಾನಾಗ್ ಮೃತ ರೈತರ ಕುಟುಂಬಕ್ಕೆ ಪರಿಹಾರವಾಗಿ ತಲಾ 5 ಲಕ್ಷ ರೂ.ಚೆಕ್ ವಿತರಣೆ ಮಾಡಿದರು. ಈ ವೇಳೆ ರೈತರು ಮೃತರ ಕುಟುಂಬಗಳಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು. ಮಕ್ಕಳಿಗೆ ಉದ್ಯೋಗ ನೀಡಬೇಕು. ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳು ವಜಾ ಆಗಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ತಮ್ಮ ಹಂತದಲ್ಲಿ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತಿದ್ದೇವೆ. ಶಾಸಕರ ಮೂಲಕ ಸರ್ಕಾರಕ್ಕೆ ನಿಯೋಗ ಕರೆದುಕೊಂಡು ಹೋಗಿ ಇಂಧನ ಸಚಿವರನ್ನು ಭೇಟಿ ಮಾಡಲಾಗುವುದು. ತಕ್ಷಣಕ್ಕೆ ಮೃತರ ಕುಟುಂಬಕ್ಕೆ ತಾತ್ಕಾಲಿಕವಾಗಿ ಉದ್ಯೋಗ ನೀಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಮೃತದೇಹಗಳನ್ನು ಶವ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಪಂಚನಾಮೆ ತಡವಾಗುವ ಹಿನ್ನೆಲೆ ಶುಕ್ರವಾರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

*ಅಯ್ಯನಪುರದಲ್ಲಿ ನಡೆದಿರುವ ವಿದ್ಯುತ್ ಅವಘಡ ಅಚಾನಕ್ ಆಗಿರುವ ಅನಾಹುತ. ವಿದ್ಯುತ್ ತಂತಿ ಕಂಬದಿಂದ ತುಂಡಾಗಿ ಕೆಳಕ್ಕೆ ಬಿದ್ದಿದ್ದರೆ ಕರೆಂಟ್ ಪ್ರವಹಿಸುವುದು ಬಂದ್ ಆಗಿಬಿಡುತ್ತಿತ್ತು. ಆದರೆ, ಕಂಬದಿಂದ ಬೇರ್ಪಟ್ಟ ವಿದ್ಯುತ್ ತಮತಿ ತುಂಡಾಗಿಲ್ಲ, ನೆಲಕ್ಕೂ ತಾಗಿಲ್ಲ. ಮಳೆ, ಗಾಳಿಗೆ ಈ ಅವಘಡ ಸಂಭವಿಸಿದೆ. ಪ್ರದೀಪ್, ಕಾರ್ಯಪಾಲಕ ಇಂಜಿನಿಯರ್, ಸೆಸ್ಕ್, ಚಾಮರಾಜನಗರ ಕೆಇಬಿಯವರು ನಿಯಮಿತವಾಗಿ ವಿದ್ಯುತ್ ಮಾರ್ಗ ಪರಿಶೀಲನೆ ನಡೆಸುತ್ತಿಲ್ಲ. ಹಳೆಯ ಕಂಬದಿಂದ ತಂತಿ ರಸ್ತೆಗೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ರೈತರು ಸತ್ತಿದ್ದಾರೆ. ಈ ಅವಘಡಕ್ಕೆ ಸೆಸ್ಕ್ ಅಧಿಕಾರಿಗಳೇ ಹೊಣೆ. ಮಲ್ಲಿಕಾರ್ಜುನಸ್ವಾಮಿ, ನಲ್ಲೂರು, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net