ವಿದ್ಯುತ್ ಖಾಸಗೀಕರಣಕ್ಕಾಗಿ ಸ್ಮಾರ್ಟ್ ಮೀಟರ್

05rajesh5
Published on

ಚಾಮರಾಜನಗರ: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡುವ ಉದ್ದೇಶದಿಂದ ಸ್ಮಾರ್ಟ್ ಮೀಟರ್ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡಲು ಮುಂದಾಗಿದ್ದು, ಮೊದಲ ಹಂತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸುತ್ತಿದೆ. ಇದರ ಮುಂದಿನ ಭಾಗವಾಗಿ ಕೃಷಿ ವಲಯಕ್ಕೂ ವಿಸ್ತರಣೆ ಮಾಡುತ್ತಿದೆ. ರೈತರನ್ನು ಕೃಷಿಯಿಂದ ಹೊರಗೆ ಇಟ್ಟು, ಕೃಷಿ ಕ್ಷೇತ್ರವನ್ನು ಬಂಡವಾಳ ಶಾಹಿಗಳಿಗೆ ವಹಿಸುವ ಹುನ್ನಾರ ಇದಾಗಿದೆ. ಆಗಾಗಿ ಬಲವಂತದಿಂದ ಸ್ಮಾರ್ಟ್ ಮೀಟರ್ ಅಳವಡಿಸುವದನ್ನು ಸಂಘಟನೆ ವಿರೋಧಿಸುತ್ತದೆ. ಸರ್ಕಾರ ಕೂಡಲೇ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ್ದು, ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಸುಪ್ರೀಂಕೋಟ್ ಆದೇಶದಿಂದ ಸರ್ಕಾರವನ್ನು ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಹರಿಸಿ ಕಬಿನಿ ಭಾಗದ ರೈತರ ಹಿತವನ್ನು ಬಲಿಕೊಡುತ್ತಿದ್ದಾರೆ. ಆಗಾಗಿ ಮೊದಲು ಕಬಿನಿಗೆ ಬಾಗಿನ ಅರ್ಪಿಸಿ ಗೌರವ ಕೊಡಬೇಕಾಗಿತ್ತು. ಆದರೆ ಕಬಿನಿ ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಈ ಸಂಬಂಧ ಸ್ಪಷ್ಟನೆ ಕೊಡುವಲ್ಲಿ ವಿಲರಾಗಿದ್ದು, ಬಾಗಿನ ಅರ್ಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಸರ್ಕಾರ ಕಳೆದ ಸಾಲಿನ ಕಬ್ಬಿನ ಬಾಕಿ 950 ಕೋಟಿ ರೂ, ಬಾಕಿ ಕೊಡಿಸುವಲ್ಲಿ ವಿಫಲವಾಗಿದೆ. ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 4000 ರೂ, ದರ ನಿಗದಿಪಡಿಸಲು, ರೈತರು ಮತ್ತು ಕಾರ್ಖಾನೆ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದೆ. ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಿವಲ್ಲಿ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ರೈತ ಮುಖಂಡರ ಸಭೆ ನಡೆಸುತ್ತಿಲ್ಲ. ಕೆರೆಕಟ್ಟೆಗಳಿಗೆ ನೀರು ತುಂಬಿಸದೇ ಮತ್ತು ನಾಲೆಗಳ ದುರಸ್ತಿ ಮಾಡುವಲ್ಲಿ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ. ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ, ವಕೀಲ ಪೃಥ್ವಿ, ಗುರುವಿನಪುರ ಚಂದ್ರು, ಅರಳಿಕಟ್ಟೆ ಪ್ರಭುಸ್ವಾಮಿ, ಮಹದೇವಪ್ಪ, ಮೂಡಹಳ್ಳಿ ರಾಜು, ಪುಟ್ಟಮಲ್ಲೇಗೌಡ, ಭವ್ಯ, ರತ್ನಮ್ಮ, ರಾಣಿ, ಗಾಯತ್ರಿ, ಮಂಗಳಮ್ಮ, ಮಹದೇವಮ್ಮ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net