ವಿದ್ಯುತ್ ಕ್ಷೇತ್ರದ ಖಾಸಗೀಕರಣ ಯತ್ನಕ್ಕೆ ವಿರೋಧ

Raithasangha
Published on

ಚಿತ್ರದುರ್ಗ: ರಾಜ್ಯ ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್‌ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಕೆಗೆ ನಿಗದಿ ಮಾಡಿರುವ 10 ಸಾವಿರ ರೂ. ಶುಲ್ಕ ಹಿಂಪಡೆಯುವುದೂ ಸೇರಿ ವಿವಿಧ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ) ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರ ಪ್ರವಾಸಿ ಮಂದಿರದಿಂದ ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸಲು ಮಾಡಿರುವ ಯತ್ನ ನಿಲ್ಲಿಸಬೇಕು. ರೈತರಿಗೆ ಅಕ್ರಮ-ಸಕ್ರಮ ಅಡಿಯಲ್ಲಿ ವಿದ್ಯುತ್ ಪರಿಕರಣ, ಈ ಹಿಂದಿನಂತೆ ಉಚಿತ ವಿದ್ಯುತ್ ನೀಡಬೇಕು. ವಿದ್ಯುತ್ ಸಂಪರ್ಕಕ್ಕೆ ಆಧಾರ್ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಜಮೀನಿನಲ್ಲಿ 3-4 ಕೊಳವೆಬಾವಿಗಳಿದ್ದು, ಅಂತರ್ಜಲ ಕಡಿಮೆ ಆದಂತಹ ಸಂದರ್ಭದಲ್ಲಿ ಆಧಾರ್‌ಕಾರ್ಡ್ ಜೋಡಣೆಯಿಂದ ರೈತರ ಬದುಕು ದುಸ್ತರವಾಗಲಿದೆ. ಸರ್ಕಾರದ ಶೀಘ್ರ ಯೋಜನೆಯಡಿ ಟಿಸಿಗಳನ್ನು ಮಾತ್ರ ನೀಡಲಿದೆ. ಕಂಬ ಮತ್ತು ವೈಯರ್‌ಗೆ ರೈತರು ಸ್ವಂತ ಖರ್ಚು ಭರಿಸುವುದು ಕಷ್ಟ ಸಾಧ್ಯ. ಆದ್ದರಿಂದ ಸರ್ಕಾರವೇ ಉಚಿತವಾಗಿ ನೀಡಬೇಕು.

ಜಮೀನಿನಲ್ಲಿ ವಾಸವಾಗಿರುವ ರೈತರು, ವಿದ್ಯಾರ್ಥಿಗಳು, ಹೈನುಗಾರಿಕೆ ಮಾಡುವವರಿಗೆ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಸಮರ್ಪಕ ವಿದ್ಯುತ್ ನೀಡಬೇಕು. ಕೆಲವು ಕಡೆ ಕೊಡುವುದು, ಕೆಲವು ಕೊಡದೇ ಇರುವ ಕ್ರಮ ತರವಲ್ಲ. 11 ಕೆವಿ ಮತ್ತು ಎಲ್ಟಿ ಲೈನ್‌ಗಳ ಮಾರ್ಗದಲ್ಲಿ ಸುಮಾರು 15 ವರ್ಷಗಳಿಂದ ಗಿಡಮರಗಳು ಬೆಳೆದಿವೆ. ಇದರಿಂದ ವಯರ್‌ಗಳು, ಪಂಪ್‌ಸೆಟ್, ಟಿಸಿ, ಮೋಟಾರ್ ಕೇಬಲ್‌ಗಳು ಸುಟ್ಟು ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತದೆ. ಬೆಸ್ಕಾಂಗೂ ಪ್ರತಿ ವರ್ಷ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಜಂಗಲ್ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಇ.ಎನ್. ಲಕ್ಷ್ಮೀಕಾಂತ್, ತಾಲೂಕು ಅಧ್ಯಕ್ಷ ಶಿವಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷ ಓಂಕಾರಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲೋಲಾಕ್ಷಮ್ಮ, ಇನ್ನಿತರ ಪದಾಧಿಕಾರಿಗಳಾದ ಸಿ.ಡಿ.ನಿಜಲಿಂಗಪ್ಪ, ನವೀನ್ ಮದಕರಿ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net