

ಬೀದರ್: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ನೌಕರರ ಸಂಘದ ಕೇಂದ್ರ ಸಮಿತಿ ಚುನಾವಣೆಯಲ್ಲಿ ಬೀದರ್ ವಿಭಾಗದಿಂದ ಮೂವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಚುನಾವಣೆ ನಡೆಯಿತು. ಕೇಂದ್ರ ಸಮಿತಿಗೆ ಬೀದರ್ ವಿಭಾಗದಿಂದ ಸತತ ಮೂರನೇ ಬಾರಿಗೆ ಸಂಘಟನಾ ಕಾರ್ಯದರ್ಶಿಯಾಗಿ ಜೆಸ್ಕಾಂ ಬೀದರ್ ವಿಭಾಗದ ಎಇಇ ವೀರಣ್ಣಾ ಮುದ್ನಾಳೆ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಅಶೋಕರೆಡ್ಡಿ ಹಾಗೂ ನಾಮ ನಿರ್ದೇಶಿತ ಸದಸ್ಯರಾಗಿ ಭರತಭೂಷಣ ಆಯ್ಕೆಗೊಂಡಿದ್ದಾರೆ.
ನೂತನ ಪದಾಧಿಕಾರಿಗಳಿಗೆ ಇಲ್ಲಿನ ಜೆಸ್ಕಾಂ ಕಚೇರಿಯಲ್ಲಿ ಅಭಿನಂದನಾ ಸಮಾರಂಭ ಜರುಗಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಣ್ಣಾ ಮುದ್ನಾಳೆ, ಜೆಸ್ಕಾಂ ಅಭಿವೃದ್ಧಿ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸಂಘವು ಶ್ರಮಿಸುತ್ತಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದಕ್ಕೆ ಸಂಘ ಅವಕಾಶ ಕೊಡದು. ಸಂಘದ ನೂತನ ರಾಜ್ಯಾಧ್ಯಕ್ಷ ಟಿ.ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಈ ದಿಸೆಯಲ್ಲಿ ಸಂಘಟಿತ ಹೋರಾಟ ನಡೆಸುವುದಾಗಿ ಹೇಳಿದರು.
ವಿದ್ಯುತ್ ಅವಘಡದಲ್ಲಿ ಮರಣ ಹೊಂದಿದ ನೌಕರರನ್ನು ಶಹೀದ್ ಎಂದು ಗೌರವಿಸಬೇಕು. ನೌಕರರ ವಿವಿಧ ಬೇಡಿಕೆಗಳು ಆದ್ಯತೆ ಮೇಲೆ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಜೆಸ್ಕಾಂ ಬೀದರ್ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಮಾಣಿಕರಾವ ಪವಾರ್ ಉದ್ಘಾಟಿಸಿದರು. ಸ್ಥಳೀಯ ಸಮಿತಿ ಅಧ್ಯಕ್ಷ ಸೂರ್ಯಕಾಂತ ಅಧ್ಯಕ್ಷತೆ ವಹಿಸಿದ್ದರು. ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ಡುಮ್ಮ್ಮೆ ನಿರೂಪಣೆ ಮಾಡಿದರು. ಜೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ಇದ್ದರು.