ವಿದ್ಯುತ್ ಕಣ್ಣಾಮುಚ್ಚಾಲೆ!

8sirsi2
Published on

ಶಿರಸಿ: ಅರೆ ಬಯಲುಸೀಮೆ ವಾತಾವರಣವಿರುವ ತಾಲೂಕಿನ ಬನವಾಸಿ ಹೋಬಳಿಯಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆಯಿಂದ ಬೆಳೆ ಒಣಗುತ್ತಿದೆ. ಅಲ್ಲದೆ, ಪಂಪ್​ಸೆಟ್​ಗಳು ಸುಟ್ಟು ಹೋಗುತ್ತಿವೆ. ಇದರಿಂದ ರೈತಾಪಿ ಸಮುದಾಯ ಕಂಗೆಟ್ಟಿದೆ.

ಜಿಲ್ಲೆಯ ಕೃಷಿ ಕಣಜವಾದ ಬನವಾಸಿ ಹೋಬಳಿಯಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ಕಾಡುತ್ತಿರುವುದು ಇಂದು ನಿನ್ನೆಯದಲ್ಲ. ಈ ಭಾಗದ 10 ಪಂಚಾಯಿತಿ ವ್ಯಾಪ್ತಿಗೆಂದು ಪ್ರತ್ಯೇಕ ವಿದ್ಯುತ್ ಗ್ರೀಡ್ ಮಂಜೂರಾಗಿ ವರ್ಷಗಳು ಉರುಳಿದರೂ ತಾಂತ್ರಿಕ ಕಾರಣದಿಂದಾಗಿ ಗ್ರೀಡ್ ನಿರ್ವಣವಾಗಿಲ್ಲ. ಲೋ ವೋಲ್ಟೇಜ್ ಜತೆಗೆ ಪದೇ ಪದೆ ಕರೆಂಟ್ ಹೋಗುತ್ತಿರುವುದರಿಂದ ಬೆಳೆಗಳ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತಿದೆ. ವಿದ್ಯುತ್ ಖೋತಾದ ಜತೆ ಆಗಾಗ ಲೋ ವೋಲ್ಟೇಜ್​ನಿಂದಾಗಿ ರೈತರ ಪಂಪ್​ಸೆಟ್​ಗಳು ಸುಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿದ್ಯುತ್ ಸಮಸ್ಯೆಯಿಂದಾಗಿ ನೂರಾರು ಹೆಕ್ಟೇರ್ ಬೆಳೆ ಒಣಗುತ್ತಿದೆ ಎಂದು ರೈತರು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ.

ಪಂಪ್ ಚಾಲನೆಗೂ ಚಿಂತೆ: ಬನವಾಸಿ ಹೋಬಳಿಯ ಬಿಸಲಕೊಪ್ಪ, ಅಂಡಗಿ, ಕಂಡ್ರಾಜಿ, ಗುಡ್ನಾಪುರ, ಭಾಶಿ, ಮಧುರವಳ್ಳಿ, ಕಲಕರಡಿ, ಮಾಳಂಜಿ, ಹಾಡಲಗಿ, ಮಳಲಗಾಂವ, ಬಂಕನಾಳ, ನರೂರ, ಕಾಯಿಗುಡ್ಡೆ, ಸುಗಾವಿ, ಬೆಂಗಳೆ, ಮರಗುಂಡಿ, ಕಂತ್ರಾಜಿ ಸೇರಿ ಎಲ್ಲ ಕಡೆ ವಿದ್ಯುತ್ ಸಮಸ್ಯೆ ಕಾಡುತ್ತಿರುವುದು ರೈತಾಪಿ ಸಮುದಾಯಕ್ಕೆ ತೀವ್ರ ಸಂಕಷ್ಟ ತಂದೊಡ್ಡಿದೆ. ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ಈಗಾಗಲೇ 15ಕ್ಕೂ ಹೆಚ್ಚು ಪಂಪ್​ಸೆಟ್​ಗಳು ಸುಟ್ಟಿವೆ. ಹೀಗಾಗಿ ನೀರಾವರಿಗಾಗಿ ಪಂಪ್ ಚಾಲನೆ ಮಾಡಲು ರೈತರು ಯೋಚಿಸುವಂತಾಗಿದೆ.

ಒಣಗುತ್ತಿರುವ ಬೆಳೆ: ಬೇಸಿಗೆ ಆರಂಭವಾಗಿ ನೀರಿನ ತುಟಾಗ್ರತೆ ಎದುರಾಗುತ್ತಿರುವ ಹೊತ್ತಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಪ್ರಮುಖ ಬೆಳೆಗಳಾದ ಅನಾನಸ್, ಶುಂಠಿ, ಬಾಳೆ, ಅಡಕೆ, ಜೋಳ ಮತ್ತಿತರ ಬೆಳೆಗಳು ನೀರಿಲ್ಲದೇ ಬಾಡುತ್ತಿವೆ. ಕೊಳವೆ ಬಾವಿಯಲ್ಲಿ ನೀರಿದ್ದರೂ ಬೆಳೆಗಳಿಗೆ ಉಣಿಸಲು ವಿದ್ಯುತ್ ಇಲ್ಲದಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ವರ್ಷಗಳಿಂದ ಈ ಸಮಸ್ಯೆಯಿದ್ದು, ಅಧಿಕಾರಿಗಳ ಸ್ಪಂದನೆ ಶೂನ್ಯ ಎನ್ನುತ್ತಾರೆ ಆ ಭಾಗದ ರೈತರು.

ಕಳೆದ ಅನೇಕ ವರ್ಷಗಳಿಂದ ಇರುವ ವೋಲ್ಟೇಜ್ ಸಮಸ್ಯೆಗೆ ಇನ್ನು ಪರಿಹಾರ ದೊರೆತಿಲ್ಲ. ಕೃಷಿಕರಿಗೆ ಕಾಡುತ್ತಿರುವ ವಿದ್ಯುತ್ ವೋಲ್ಟೇಜ್ ಸಮಸ್ಯೆಗೆ ಮುಕ್ತಿ ನೀಡಲೆಂದು ಕೆಪಿಟಿಸಿಎಲ್​ನಿಂದ ಬನವಾಸಿಗೆ ಪ್ರತ್ಯೇಕ ಗ್ರೀಡ್ ಮಂಜೂರಾಗಿದೆ. 9.28 ಕೋಟಿ ರೂಪಾಯಿ ವೆಚ್ಚದ ಪ್ರತ್ಯೇಕ ಗ್ರಿಡ್ ಕಾಮಗಾರಿ ಇನ್ನು ಆರಂಭವಾಗಿಲ್ಲ. ಸಂಬಂಧಪಟ್ಟವರು ಗಮನ ಹರಿಸಿ ಇರುವ ತಾಂತ್ರಿಕ ಅಡಚಣೆ ನಿವಾರಿಸಿ ಗ್ರೀಡ್ ನಿರ್ವಣಕ್ಕೆ ಮುಂದಾಗಬೇಕು. | ಶ್ರೀಲತಾ ಕಾಳೇರಮನೆ ಅಧ್ಯಕ್ಷೆ ಶಿರಸಿ ತಾಲೂಕು ಪಂಚಾಯಿತಿ

ಬನವಾಸಿ ಭಾಗದಲ್ಲಿ ಕೃಷಿಯೇ ಜೀವನಾಧಾರವಾಗಿದ್ದು, ಬೆವರು ಸುರಿಸಿ ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಬೇಸಿಗೆ ಆರಂಭದಿಂದ ಮುಕ್ತಾಯದವರೆಗೂ ನಿತ್ಯವೂ ಸಮಸ್ಯೆಯಾಗುತ್ತದೆ. ಬೆಳೆಗೆ ನೀರು ಬಿಡಲಾಗದೆ ಒಣಗುತ್ತಿರುವ ಬೆಳೆ ನೋಡುತ್ತ ಅಸಹಾಯಕವಾಗಿ ಇರುವುದು ಇಲ್ಲಿನ ರೈತರ ಸ್ಥಿತಿಯಾಗಿದೆ. | ಶಂಕರ ಗೌಡ ಬನವಾಸಿ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net