ವಿದ್ಯುತ್ ಕಡಿತ; ದಾಖಲೆ ಪರಿಶೀಲನೆ ವಿದ್ಯಾರ್ಥಿಗಳ ಪರದಾಟ

ವಿದ್ಯುತ್ ಕಡಿತ; ದಾಖಲೆ ಪರಿಶೀಲನೆ ವಿದ್ಯಾರ್ಥಿಗಳ ಪರದಾಟ
Published on

ಹಾಸನ: ನಗರದಲ್ಲಿ ಶುಕ್ರವಾರ ವಿದ್ಯುತ್ ಕಡಿತಗೊಳಿಸಿದ್ದರಿಂದ ಸಿಇಟಿ ರ‌್ಯಾಂಕಿಂಗ್ ಪಡೆದ ವಿದ್ಯಾರ್ಥಿಗಳು ತಮ್ಮ ದಾಖಲೆಗಳ ಪರಿಶೀಲನೆಗೆ ಗಂಟೆಗಟ್ಟಲೇ ಕಾದು ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು.

ಇತ್ತೀಚೆಗೆ ಸಿಇಟಿ ರ‌್ಯಾಂಕಿಂಗ್ ಫಲಿತಾಂಶ ಪ್ರಕಟವಾಗಿದ್ದು, ದಾಖಲೆ ಪರಿಶೀಲನೆಗೆ ಅಧಿಕಾರಿಗಳು ಶುಕ್ರವಾರ ದಿನಾಂಕ ನಿಗದಿಪಡಿಸಿದ್ದರು. ಅದರಂತೆ ವಿದ್ಯಾರ್ಥಿಗಳು ನಗರ ಬಸ್ ನಿಲ್ದಾಣದ ಬಳಿ ಇರುವ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ ಬಳಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಆಗಮಿಸಿದ್ದರು. ಆದರೆ, ವಿದ್ಯುತ್ ಇಲ್ಲವಾದ್ದರಿಂದ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಕಾದು ಕುಳಿತ್ತಿದ್ದರು.

66/11ಕೆ.ವಿ ಸಂತೆಪೇಟೆ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಾಸನ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಚೆಸ್ಕಾಂ ಎರಡು ದಿನ ಮೊದಲೇ ಪ್ರಕಟಣೆ ಹೊರಡಿಸಿತ್ತು. ಇದು ಗೊತ್ತಿದ್ದರೂ ದಾಖಲೆ ಪರಿಶೀಲನೆಗೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದ ವಿದ್ಯಾರ್ಥಿಗಳು ಗಂಟೆಗಟ್ಟಲೇ ಕಾದು ನಿಲ್ಲುವಂತಾಯಿತು. ಕಾದು ಕಾದು ಸುಸ್ತಾದ ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net