

ಗುಬ್ಬಿ: ತಾಲೂಕಿನ ಕೆಲವೆಡೆ ವಿದ್ಯುತ್ ಕಂಬಗಳು ದುಸ್ಥಿಯಲ್ಲಿದ್ದರೆ, ಕೆಲವೆಡೆ ತಂತಿಗಳು ತೀರಾ ಕೆಳಮಟ್ಟದಲ್ಲಿ ಹಾದುಹೋಗಿವೆ. ಇನ್ನು ಹಲವೆಡೆ ವಿದ್ಯುತ್ ಪರಿವರ್ತಕಗಳಿಗೆ ಸೂಕ್ತ ರೀತಿಯಲ್ಲಿ ತಂತಿಬೇಲಿಯನ್ನು ಅಳವಡಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗುಬ್ಬಿ ತಾಲೂಕಿನ ಬೆಣಚಿಗೆರೆ ಗ್ರಾಮದಲ್ಲಿ ವಿದ್ಯುತ್ ಕಂಬಕ್ಕೆ ಬಳ್ಳಿಗಳು ಬೆಳೆದಿರುವುದರಿಂದ ಗಾಳಿ ಬಿಸಿದರೆ ಸಾಕು ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಉಂಟಾಗುತ್ತಿದೆ. ಗ್ರಾಮ, ತೋಟಗಳಲ್ಲಿ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟದಲ್ಲಿ ಹಾದು ಹೋಗಿದ್ದು, ಕೈಗೆ ಎಟಕುವ ಸ್ಥಿತಿಯಲ್ಲಿದೆ. ಹಲವೆಡೆ ಹಳೆಯ ತಂತಿಗಳನ್ನು ಎಳೆದಿರುವುದರಿಂದ ಮಳೆಗಾಲದಲ್ಲಿ ಗಾಳಿ ಮಳೆಗೆ ಮರ ಹಾಗೂ ಕೊಂಬೆಗಳು ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬಿದ್ದು ತಂತಿ ತುಂಡಾಗುವ ಘಟನೆ ಹೆಚ್ಚಾಗಿದೆ. ಇದರಿಂದ ರೈತರು, ಜಾನುವಾರುಗಳು ಜೀವನ ಕಳೆದುಕೊಳ್ಳುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಸಮಸ್ಯೆ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿದ್ಯುತ್ ಪರಿವರ್ತಕಗಳು ಹಾಗೂ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಬೆಳೆದುಕೊಂಡಿರುವುದು ನಮ್ಮ ಗಮನಕ್ಕೆ ಬಂದರೆ ತಕ್ಷಣ ತಗಿಸುತ್ತೇವೆ. ಸಾರ್ವಜನಿಕರಿಗೆ ತೊಂದರೆಯಾಗುವಂತಿರುವ ವಿದ್ಯುತ್ ಕಂಬ ಮತ್ತು ತಂತಿ ಸರಿಪಡಿಸಲಾಗುವುದು.
| ಸಿದ್ದೇಗೌಡ ಎಇಇ ಬೆಸ್ಕಾಂ ಇಲಾಖೆ ನಿಟ್ಟೂರು