ವಿದ್ಯುತ್ ಅವಘಡದ ಆತಂಕದಲ್ಲಿ ರೈತರು

28rajesh4
Published on

ಚಾಮರಾಜನಗರ: ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳಿಂದ ಜನ-ಜಾನುವಾರುಗಳು ಬಲಿಯಾಗುತ್ತಿದ್ದು, ಹಳೆಯದಾದ ವಿದ್ಯುತ್ ಕಂಬಗಳು, ಜೋತುಬಿದ್ದಿರುವ ವಿದ್ಯುತ್ ತಂತಿಗಳಿಂದ ವಿದ್ಯುತ್ ಮೇಲೆ ನಿತ್ಯವೂ ಅವಲಂಬಿತವಾಗಿರುವ ರೈತಾಪಿ ವರ್ಗ ಆತಂಕದಲ್ಲಿ ಬದುಕು ದೂಡುವಂತಾಗಿದೆ.

ಚಾಮರಾಜನಗರ ಉಪ ವಿಭಾಗದ ಉಪ ವಿದ್ಯುತ್ ಪರಿವೀಕ್ಷಕರ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, 2022-23ನೇ ಸಾಲಿನಲ್ಲಿ ವಿದ್ಯುತ್ ಅವಘಡಗಳಿಂದ 6 ಜನರು ಮೃತಪಟ್ಟಿದ್ದು, 9 ಜಾನುವಾರುಗಳು ಅಸುನೀಗಿದೆ. 2023-24ನೇ ಸಾಲಿನಲ್ಲಿ ಇಬ್ಬರು ಮೃತಪಟ್ಟಿದ್ದರೇ, 7 ಜಾನುವಾರುಗಳು ಬಲಿಯಾಗಿದೆ. 2024 ರ ಏಪ್ರಿಲ್‌ನಿಂದ ಈವರೆಗೆ ಇಬ್ಬರು ಮೃತಪಟ್ಟಿದ್ದರೇ, 7 ಸಾಕು ಪ್ರಾಣಿಗಳು ಸತ್ತಿದೆ. ಪರಿಣಾಮವಾಗಿ ವಿದ್ಯುತ್ ಅವಘಡಗಳು ಕೃಷಿಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತಿದೆ.

ಒಂದೆಡೆ ರೈತರು ಮೃತಪಟ್ಟರೇ, ಮತ್ತೊಂದೆಡೆ ಜಾನುವಾರುಗಳು ಸಾಯುತ್ತಿವೆ. ಇದಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿಬರುತ್ತಿದೆ. ಜಮೀನುಗಳಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಜೋತುಬಿದ್ದಿರುವುದು, ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಇರುವುದು, ವಿದ್ಯುತ್ ಕಂಬಗಳ ಮೇಲೆ ಬಳ್ಳಿ ಹಬ್ಬಿರುವುದು ಹಾಗೂ ಇನ್ನಿತರೆ ಸಮಸ್ಯೆಗಳಿಂದ ರೈತಾಪಿ ವರ್ಗ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತಿದೆ. ರೈತರು ಕೃಷಿ ಚಟುವಟಿಕೆಗಳನ್ನು ಮಾಡಲು ತೊಡಕಾಗಿರುವ ವಿದ್ಯುತ್ ಸಂಬಂಧಿತ ಸಮಸ್ಯೆಗಳು ಯಾವುದು? ಅದಕ್ಕೇ ಪರಿಹಾರಗಳು ಏನು? ಎಂಬುವ ನಿಟ್ಟಿನಲ್ಲಿ ರೈತ ಮುಖಂಡರು, ರೈತರು ಹಾಗೂ ಅಧಿಕಾರಿಗಳಿಂದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net