ವಿದ್ಯುತ್ ಅದಾಲತ್‌ನಲ್ಲಿ ಸಾರ್ವಜನಿಕರು ಆರೋಪ

ವಿದ್ಯುತ್ ಅದಾಲತ್‌ನಲ್ಲಿ ಸಾರ್ವಜನಿಕರು ಆರೋಪ
Published on


ಅರಕಲಗೂಡು: ಮನೆಯ ಮುಂಭಾಗ ವಿದ್ಯುತ್ ತಂತಿ ಜೋತು ಬಿದ್ದಿದ್ದು ತಿರುಗಾಡಲು ಭಯವಾಗುತ್ತಿದೆ, ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಗಾಳಿ ಮಳೆಗೆ ಲೈನ್‌ಗಳು ಒಂದಕ್ಕೊಂದು ತಾಗಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಸೆಸ್ಕ್ ಸಿಬ್ಬಂದಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಶನಿವಾರ ತಾಲೂಕಿನ ಯಲಗತವಳ್ಳಿ ಗ್ರಾಪಂ ವ್ಯಾಪ್ತಿಯ ಯಗಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್‌ನಲ್ಲಿ ಸಾರ್ವಜನಿಕರು ಆರೋಪಗಳ ಸುರಿಮಳೆಗೈದರು.


ಸೆಸ್ಕ್ ವತಿಯಿಂದ ಹಾಸನ ವಲಯ ಮುಖ್ಯ ಇಂಜಿನಿಯರ್ ಮಹದೇವಸ್ವಾಮಿ ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆದ ಯಗಟಿ, ಯಲಗತವಳ್ಳಿ ಸುತ್ತಮುತ್ತಲ ಗ್ರಾಮಸ್ಥರು ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಅನಾವರಣಗೊಳಿಸಿದರು.
ಯಗಟಿಯಲ್ಲಿ ಮನೆಯ ಮುಂಭಾಗ ವಿದ್ಯುತ್ ತಂತಿ ಜೋತು ಬಿದ್ದಿದ್ದು ತಿರುಗಾಡಲು ಭಯವಾಗುತ್ತಿದೆ. ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಏನಾದರು ಅವಘಡ ಸಂಭವಿಸಿದರೆ ಸೆಸ್ಕ್ ಅಧಿಕಾರಿಗಳೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ನಿವಾಸಿ ಆಕ್ರೋಶ ವ್ಯಕ್ತಪಡಿಸಿದರು.


ಇದಕ್ಕೆ ಮುಖ್ಯ ಇಂಜಿನಿಯರ್ ಮಹದೇವಸ್ವಾಮಿ ಪ್ರಸನ್ನ ಪ್ರತಿಕ್ರಿಯಿಸಿ, ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸರಿಪಡಿಸುವಂತೆ ಲೈನ್ ಮನ್ ಗಳಿಗೆ ಸೂಚಿಸಿದರು.


ಯಲಗತವಳ್ಳಿ ಗಿರೀಶ್ ಮಾತನಾಡಿ, ಮನೆಯ ಮುಂಭಾಗದಲ್ಲಿ ವಿದ್ಯುತ್ ಲೈನ್ ಹಾದುಹೋಗಿದ್ದು, ಕಂಬದ ಅಂತರ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ಗಾಳಿಗೆ ಒಂದಕ್ಕೊಂದು ವೈರ್ ಗಳು ತಾಗಿ ಬೆಂಕಿ ಹೊತ್ತಿ ಬರುತ್ತಿದ್ದು, ತುಂಡಾಗಿ ಬೀಳುವ ಸಂಭವ ಹೆಚ್ಚಿದೆ. ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಈ ಕುರಿತು ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಮತ್ತೊಂದು ಕಂಬವನ್ನು ಅಳವಡಿಸಬೇಕು ಎಂದಾಗ, ಮಹಾದೇವಸ್ವಾಮಿ ಅವರು ಪ್ರತಿಕ್ರಿಯಿಸಿ, ಕೂಡಲೇ ಕಂಬ ಅಳವಡಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಕೆಲ ಗ್ರಾಮಸ್ಥರು ಕಂಬ ಮತ್ತು ವೈರುಗಳ ಬದಲಾವಣೆ ಮಾಡಿಸುವಂತೆ ದೂರು ನೀಡಿದರೆ, ಮತ್ತೆ ಕೆಲವರು, ಟ್ರಾನ್ಸ್ಫರ್ಮರ್ ಗೆ ಅಳವಡಿಸಿರುವ ವೈರ್ಗಲು ತುಕ್ಕು ಹಿಡಿದಿದ್ದು ಬದಲಿಸುವಂತೆ ದೂರು ನೀಡಿದರು.
ಈ ವೇ ಭೇಟಿ ನೀಡಿ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದೇ ವಿದ್ಯುತ್ ಅದಾಲತ್ ನ ಮುಖ್ಯ ಉದ್ದೇಶವಾಗಿದೆ. ವಿದ್ಯುತ್ ಕಂಬ, ವೈರ್ ಬದಲಾವಣೆ ಮಾಡಿಕೊಡುವ ಬಗ್ಗೆ ಹೆಚ್ಚು ದೂರುಗಳು ಬಂದಿದ್ದು, 8 ಅರ್ಜಿಗಳು ಬಂದಿವೆ. ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.


ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಅರಕಲಗೂಡು ಸಹಾಯಕ ಇಂಜಿನಿಯರ್ ಚಿದಂಬರ, ಟೆಕ್ನಿಶಿಯನ್ ನಾಗೇಶ್, ವಿಭಾಗಿಯ ಅಧಿಕಾರಿ ಸುಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net