ವಿದ್ಯಾವಂತರಾಗಲು ಜಾತಿ ಅಡ್ಡಿ ಬರಲ್ಲ: ಸಿದ್ದರಾಮಯ್ಯ

mysore
Published on

ಮೈಸೂರು: ವಿದ್ಯೆ ಯಾರೊಬ್ಬರ ಸ್ವತ್ತೂ ಅಲ್ಲ. ವಾಲ್ಮೀಕಿ, ವ್ಯಾಸ, ಕನಕದಾಸ ಎಲ್ಲರೂ ಶೂದ್ರ, ದಲಿತ ಸಮುದಾಯದವರು. ಮೇಲ್ವರ್ಗಕ್ಕೆ ಮಾತ್ರ ಶಿಕ್ಷಣ ಎನ್ನುವುದು ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯಿಂದ ಎಚ್.ಡಿ.ಕೋಟೆಯಲ್ಲಿ   ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ, 443.64 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ವಾಲ್ಮೀಕಿಯವರು ಸಂಸ್ಕೃತದಲ್ಲಿ 20 ಸಾವಿರ ಶ್ಲೋಕ ರಚಿಸಿದ್ದಾರೆ. ಶೂದ್ರ ವರ್ಗದ ಜನ ವಿದ್ಯೆ ಕಲಿಯುವುದೇ ನಿಷಿದ್ಧವಾಗಿದ್ದ ಕಾಲದಲ್ಲಿ ವಿದ್ಯೆಯೊಂದಿಗೆ ಸಂಸ್ಕೃತವನ್ನೂ ಕಲಿತು ರಾಮಾಯಣ ರಚಿಸಿದ್ದು ಸಣ್ಣ ಕೆಲಸವಲ್ಲ. ಅದು ಮಹಾನ್ ಸಾಧನೆ ಎಂದರು.

ಮಹಾಭಾರತ ಬರೆದ ವ್ಯಾಸರು ಬೆಸ್ತರು, ರಾಮಾಯಣ ಬರೆದ ವಾಲ್ಮೀಕಿ ಬೇಡ ಸಮುದಾಯದವರು, ಶಾಕುಂತಲ ನಾಟಕ ಬರೆದ ಕಾಳಿದಾಸರು ಕುರುಬರು. ಶೂದ್ರ ಜಾತಿಯ ಕನಕದಾಸರು ದಾಸ ಶ್ರೇಷ್ಠರಾದರು. ವಿದ್ಯೆ ಯಾರೊಬ್ಬರ ಸ್ವತ್ತೂ ಅಲ್ಲ. ಅವಕಾಶಗಳು ಸಿಗಬೇಕಷ್ಟೇ. ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಶಿಲ್ಪಿ ನಾವೇ. ವಿದ್ಯಾವಂತರಾಗಲು ಜಾತಿ ಅಡ್ಡಿ ಬರಲ್ಲ. ಮೇಲ್ವರ್ಗದವರಿಗೆ ಮಾತ್ರ ವಿದ್ಯೆ ಎನ್ನುವುದನ್ನು ನಮ್ಮಲ್ಲಿ ಬಿತ್ತಿದ್ದಾರೆ. ಇದು ತಪ್ಪು ಎಂದರು.

ವಿದ್ಯೆ ಕಲಿಯದಿದ್ದರೆ ಈ ಮಹನೀಯರು ಮಹಾಕಾವ್ಯ ಬರೆಯಲು ಆಗುತ್ತಿರಲಿಲ್ಲ. ಮೇಲ್ವರ್ಗದವರು ಮಾತ್ರ ವಿದ್ಯಾವಂತರು. ಕೆಳವರ್ಗದವರು ವಿದ್ಯಾವಂತರಾಗಲ್ಲ ಎಂಬ ಸುಳ್ಳನ್ನು ತುಂಬಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು

ನಮ್ಮಪ್ಪ ಶ್ಯಾನುಭೋಗರಾಗಿದ್ದ ಚನ್ನಪ್ಪಯ್ಯ ಅನ್ನುವವರ ಮೇಲ್ವರ್ಗದವರ ಮಾತು ಕೇಳಿ, ಕುರುಬರೆಲ್ಲ ಲಾಯರ್ ಓದೋಕೆ ಆಗಲ್ಲ ಎನ್ನುತ್ತಿದ್ದರು. ಆದರೆ, ನಾನು ಹಠ ತೊಟ್ಟು ಕಾನೂನು ಓದಿ ಲಾಯರ್ ಆದೆ. ನಾನು ಓದದಿದ್ದರೆ ಸಿಎಂ ಆಗಲು ಸಾಧ್ಯವಾಗುತ್ತಿತ್ತೇ? ಪ್ರತಿಯೊಬ್ಬ ಮಕ್ಕಳನ್ನು ವಿದ್ಯಾವಂತರಾಗಿ ಮಾಡಲೇ ಬೇಕು ಎಂದು ಸಲಹೆ ನೀಡಿದರು.

ಈಗಿನ ಪ್ರಜಾಪ್ರಭುತ್ವಕ್ಕೆ ವಾಲ್ಮೀಕಿ ಅವರು ಅವತ್ತೇ ಅಡಿಪಾಯ ಹಾಕಿದ್ದರು. ಮಹಾತ್ಮ ಗಾಂಧಿಯವರು ಹೇಳುವ ರಾಮರಾಜ್ಯವನ್ನು ವಾಲ್ಮೀಕಿ ಅವರು ರಾಮಾಯಣದಲ್ಲೇ ಆ ಪರಿಕಲ್ಪನೆ ಕೊಟ್ಟಿದ್ದರು. ಆದರೂ ವಾಲ್ಮೀಕಿ ಅವರು ದರೋಡೆಕೋರ ಆಗಿದ್ದರು ಎಂದೆಲ್ಲ ಸುಳ್ಳು ಕಥೆ ಕಟ್ಟಲಾಗಿದೆ. ಇವೆಲ್ಲ ನಂಬೋಕೆ ಹೋಗಬೇಡಿ. ಹೀಗಾಗಿದ್ದರೆ ರಾಮಾಯಣ ರಚಿಸಲು ಸಾಧ್ಯವೇ? ವಾಲ್ಮೀಕಿ ಮಹಾನ್ ಮೇದಾವಿ, ವಿದ್ಯಾವಂತರು ಎಂದರು.

ಎಚ್.ಡಿ.ಕೋಟೆಯಲ್ಲಿರುವ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು 2 ಕೋಟಿ ರೂ. ಅನುದಾನ ನೀಡಲಾಗುವುದು ಎಎಂದು ಭರವಸೆ ನೀಡಿದರು.

ಅನಿಲ್ ಚಿಕ್ಕಮಾದುಗೆ ಶಕ್ತಿ ತುಂಬುವೆ

ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ಕೊಡಲ್ಲ. ರಾಜಕೀಯವಾಗಿ ಶಕ್ತಿ ತುಂಬ ಕೆಲಸ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅನಿಲ್ ಕುಮಾರ್ ಅವರಿಗೆ ಸಚಿವಸ್ಥಾನ ನೀಡಬೇಕೆಂಬ ಬೇಡಿಕೆಗೆ ತಕ್ಷಣ ಪ್ರತಿಕ್ರಿಯಿಸಿದ ಸಿಎಂ, ಸಚಿವ ಸ್ಥಾನ ಖಾಲಿ ಇಲ್ಲ. ಎಲ್ಲರಿಗೂ ಅವಕಾಶ ಕೊಡಲೂ ಆಗಲ್ಲ. ಶಾಸಕ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ಕೊಡಬೇಕು. ಅದನ್ನು ಮಾಡುತ್ತೇನೆ. ನಿಮ್ಮ ಮೆಚ್ಚಿಸಲು ಸುಳ್ಳು ಹೇಳಲ್ಲ. ಹೇಳಿದ ಮೇಲೆ ಹಾಗೇ ನಡೆದುಕೊಳ್ಳುವೆ ಎಂದು ಸಭಿಕರಿಗೆ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net