

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾವು ಪಡೆಯುವ ವಿದ್ಯಾರ್ಹತೆಗಿಂತ ಕೌಶಲವೇ ಮುಖ್ಯ. ಇಂದಿನ ದಿನಗಳಲ್ಲಿ ಉದ್ಯೋಗದಾತರು ಕೌಶಲ ಆಧರಿಸಿಯೇ ಉದ್ಯೋಗ ನೀಡುತ್ತಿದ್ದಾರೆ. ಭಾಷಾ ಕೌಶಲ, ಕಂಪ್ಯೂಟರ್ ಕೌಶಲಗಳು ಉದ್ಯೋಗ ಪಡೆಯುವಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತರಬೇತಿಯನ್ನು ಎಲ್‌ಟಿ ಮೈಂಡ್ ಟ್ರೀ ಸಹಯೋಗದಲ್ಲಿ ಆಯೋಜಿಸಿದ್ದು, 18 ತಿಂಗಳ ಅವಧಿಯಲ್ಲಿ ಪ್ರತಿ ಅಭ್ಯರ್ಥಿಗೆ ತಿಂಗಳಿಗೆ 4000 ರೂ. ಶಿಷ್ಯವೇತನ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ತರಬೇತಿ ಪಡೆಯಬಹುದು ಎಂದರು.
ಅತಿಥಿಯಾಗಿ ಆಗಮಿಸಿದ್ದ ನಾಗಪ್ಪ ಅಕ್ಕಿ ಮಾತನಾಡಿ, ಕಂಪ್ಯೂಟರ್ ತಂತ್ರಜ್ಞಾನವು ಶಿಕ್ಷಣ ಮೇಲೆ ದೊಡ್ಡ ಪ್ರಭಾವ ಬೀರಿದೆ. ಇಂದಿನ ದಿನಮಾನಗಳಲ್ಲಿ ಕಂಪ್ಯೂಟರ್ ಕೌಶಲ ಇಲ್ಲದಿದ್ದರೆ ಶಿಕ್ಷಣ ಅಪೂರ್ಣವಾದಂತೆ. ಶಿಕ್ಷಣ ಹಾಗೂ ವಿವಿಧ ಕ್ಷೇತ್ರದಲ್ಲಿ ಕಂಪ್ಯೂಟರ್ ಕೌಶಲ ಅಗತ್ಯ. ಆದರೆ ಈ ಕೌಶಲ ಇಲ್ಲದ ಅನೇಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅಂತಹವರ ಅನುಕೂಲಕ್ಕಾಗಿ ತರಬೇತಿ ಏರ್ಪಡಿಸಲಾಗಿದೆ ಎಂದರು.
ಎಲ್‌ಟಿ ಮೈಂಡ್ ಟ್ರೀ ಸಂಸ್ಥೆಯ ದೀಪಕ ಮಟ್ಟಿ, ಸೂರಜ್ ಜೈನ್, ಅಭ್ಯರ್ಥಿಗಳು, ಇತರರು ಇದ್ದರು.