ವಿದ್ಯಾರ್ಥಿವೇತನಕ್ಕೆ ಆಗ್ರಹಿಸಿ ದಸಂಸದಿಂದ ಪ್ರತಿಭಟನೆ

36
Published on

ಮೈಸೂರು: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ರದ್ದು ಗೊಳಿಸಿರುವ ಕ್ರಮ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ನಗರದ ಪುರಭವನದ ಮುಂಭಾಗ ಧರಣಿ ನಡೆಸಿದ ಪ್ರತಿಭಟನಾಕಾರರು, 1 ರಿಂದ 8ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಜನಾಂಗದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವೇತನವನ್ನು ರದ್ದುಪಡಿಸುವ ಮೂಲಕ ತಳವರ್ಗದ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಲು ಸಂಚು ನಡೆದಿದೆ ಎಂದು ದೂರಿದರು.
ಯಾವುದೇ ದೇಶ ಸದೃಢವಾಗಿ ರೂಪುಗೊಂಡು ಅಭಿವೃದ್ಧಿ ಸಾಧಿಸಬೇಕಾದರೆ ಆ ದೇಶದಲ್ಲಿ ಶಿಕ್ಷಣದ ಪ್ರಗತಿ ಮುಖ್ಯ. ಅದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಸಂವಿಧಾನದಲ್ಲಿ ಅಳಡಿಸಿದ ಮೇಲೆ ಶೋಷಿತರು ಅಕ್ಷರ ಕಲಿಯಲು ಸಾಧ್ಯವಾಯಿತು ಎಂದರು.
ಹಿಂದಿನ ಸರ್ಕಾರಗಳು ಇಂತಹ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿವೆ. ಆದರೆ, ಬಿಜೆಪಿ ಸರ್ಕಾರ ದಿಢೀರನೇ ವೇತನ ರದ್ದುಗೊಳಿಸಿರುವುದು ಖಂಡನೀಯ. ಇದರಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮುಖಂಡರಾದ ಉಗ್ರ ನರಸಿಂಹೇಗೌಡ, ಬಕ್ಕಳೆ ನಂಜುಂಡಸ್ವಾಮಿ, ಕಂದೇಗಾಲ ಶಿವಣ್ಣ, ಬಿಳಿಕೆರೆ ದೇವರಾಜು, ತಳೂರು ಸಂತೋಷ, ಗೋವಿಂದರಾಜು, ಪ್ರಭು, ಮಂಜುನಾಥ್, ಮರುಗಡಹಳ್ಳಿ ಮಹದೇವು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net