ವಿದ್ಯಾರ್ಥಿಯ ಶುಲ್ಕ ಕಟ್ಟಿದ ಕ್ರಿಕೆಟಿಗ ಕೆ.ಎಲ್. ರಾಹುಲ

K.L._Rahul_(1)
Published on

ಹುಬ್ಬಳ್ಳಿ: ಹುಬ್ಬಳ್ಳಿಯ ಕೆಎಲ್​ಇ ಸಂಸ್ಥೆಯಲ್ಲಿ ಬಿಕಾಂ ವ್ಯಾಸಂಗಕ್ಕೆ ಶುಲ್ಕ ಕಟ್ಟಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಮಹಾಲಿಂಗಪುರದ ವಿದ್ಯಾರ್ಥಿ ಅಮೃತ ಮಾವಿನಕಟ್ಟಿಗೆ ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ ನೆರವಾಗಿದ್ದಾರೆ.

ಅಮೃತ ಮಾವಿನಕಟ್ಟಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 571 ಅಂಕಗಳಿಸಿದ್ದ. ಹುಬ್ಬಳ್ಳಿಯ ಕೆಎಲ್​ಇ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುವುದು ಆತನ ಕನಸಾಗಿತ್ತು. ಆದರೆ, 85 ಸಾವಿರ ರೂ. ಶುಲ್ಕ ಪಾವತಿಸುವುದು ಕಷ್ಟಕರವಾಗಿತ್ತು. ಅಮೃತ್ ಶೇ. 95 ಅಂಕಗಳಿಸಿದ್ದರಿಂದ ಕೆಎಲ್​ಇ ಸಂಸ್ಥೆಯ ಆಡಳಿತ ಮಂಡಳಿ ಶುಲ್ಕದಲ್ಲಿ 10 ಸಾವಿರ ರೂ. ರಿಯಾಯಿತಿ ನೀಡಿತ್ತು. ಆದರೆ, ಇಷ್ಟು ಮೊತ್ತವನ್ನು ಪಾವತಿಸುವುದು ಸಹ ಅಮೃತ್​ನ ಕುಟುಂಬಕ್ಕೆ ಸಾಧ್ಯವಿರಲಿಲ್ಲ.

ಆಗ, ಅಮೃತನ ಸ್ನೇಹಿತನೊಬ್ಬ ಮಂಜುನಾಥ ಹೆಬಸೂರ ಅವರನ್ನು ಸಂರ್ಪಸುತ್ತಾನೆ. ಮಂಜುನಾಥ ಅವರು ತನ್ನ ಕಾಲೇಜ್ ಸಹಪಾಠಿ ಅಕ್ಷಯ ಬಳಿ ಅಮೃತ್​ನ ಪರಿಸ್ಥಿತಿಯನ್ನು ವಿವರಿಸುತ್ತಾರೆ. ಮುಂಬೈನಲ್ಲಿ ಜಾಹೀರಾತು ಏಜೆನ್ಸಿ ನಡೆಸುತ್ತಿರುವ ಅಕ್ಷಯ, ಖ್ಯಾತ ಕ್ರಿಕೆಟಿಗರ ಸಂಪರ್ಕದಲ್ಲಿದ್ದರು. ತಕ್ಷಣ ಅಕ್ಷಯ ಅವರು ಕ್ರಿಕೆಟಿಗ ಕೆ.ಎಲ್. ರಾಹುಲ್ ಗೆ ಕರೆ ಮಾಡಿ ಅಮೃತನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಕೋರುತ್ತಾರೆ. ಬಳಿಕ ಕೆ.ಎಲ್. ರಾಹುಲ್, ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು 75 ಸಾವಿರ ಹಣ ಜಮೆ ಮಾಡಿದ್ದಾರೆ.

ನನ್ನ ಶಿಕ್ಷಣಕ್ಕೆ ನೆರವಾದ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಮಂಜನಾಥ ಹೆಬಸೂರ ಅವರಿಗೆ ಧನ್ಯವಾದಗಳು. ಅವರಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಅಮೃತ ಮಾವಿನಕಟ್ಟಿ ಕೃತಜ್ಞತೆ ವ್ಯಕ್ತಪಡಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net