ವಿದ್ಯಾರ್ಥಿನಿಲಯದಲ್ಲಿ ಖಾಲಿ ಉಳಿದ ಸೀಟುಗಳ ಪ್ರವೇಶಕ್ಕೆ ಕೌನ್ಸೆಲಿಂಗ್

34web
Published on

ಮೈಸೂರು: ಸರ್ಕಾರದ ನಿರ್ದೇಶನದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಉಳಿದಿದ್ದ ಸೀಟುಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ಮುಖಾಂತರ ಆಯ್ಕೆ ಮಾಡಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ್ ತಿಳಿಸಿದರು.
ಕುವೆಂಪುನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕೌನ್ಸೆಲಿಂಗ್‌ನಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರತಿ ವಿದ್ಯಾರ್ಥಿನಿಲಯಕ್ಕೂ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿತ್ತು. ವಿದ್ಯಾರ್ಥಿನಿಲಯವಾರು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈಗ ಇಡೀ ತಾಲೂಕಿಗೆ ಅನ್ವಯಿಸುವಂತೆ ಒಂದೇ ಅರ್ಜಿಯಲ್ಲಿ ಗರಿಷ್ಠ ಅಂಕಗಳು ಹಾಗೂ ವರ್ಗಾವಾರು ಮೂಲಕ ವಿದ್ಯಾರ್ಥಿಗಳು ಅವರು ಬಯಸಿದ ವಿದ್ಯಾರ್ಥಿನಿಲಯ ಆಯ್ಕೆ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
ಹಾಸ್ಟೆಲ್‌ನಲ್ಲಿ ಬಾಲಕರ 461 ಸೀಟ್‌ಗಳು ಖಾಲಿ ಇದ್ದು, 1027 ಅರ್ಜಿಗಳು ಬಂದಿವೆ. ಬಾಲಕಿಯರ 408 ಸೀಟ್‌ಗಳು ಖಾಲಿ ಇದ್ದು, 1097 ಅರ್ಜಿಗಳು ಬಂದಿವೆ. ಇದರಲ್ಲಿ ಅಂಗವಿಕಲರು, ಅಂಧರಿಗೆ ಹಾಗೂ ಕೋವಿಡ್‌ನಲ್ಲಿ ಮೃತಪಟ್ಟ ಪಾಲಕರ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಸರ್ಕಾರ ಪ್ರತಿ ವಿದ್ಯಾರ್ಥಿನಿಲಯಕ್ಕೆ ಶೇ.25 ರಷ್ಟು ಹೆಚ್ಚುವರಿ ಸೀಟು ನೀಡಿದ್ದರೂ ಪೂರ್ಣಪ್ರಮಾಣದಲ್ಲಿ ಅರ್ಜಿ ಸಲ್ಲಿಸಿದವರಿಗೆಲ್ಲ ಸೀಟುಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ತಾಲೂಕು ಕಲ್ಯಾಣಾಧಿಕಾರಿ ಚಂದ್ರಕಲಾ, ವಿಸ್ತರಣಾಧಿಕಾರಿ ಸತೀಶ್, ನಿಲಯ ಪಾಲಕರಾದ ಜಗದೀಶ್ ಕೋರಿ, ಪರಶುರಾಂ, ವೀರಬಸಪ್ಪ, ಮಂಜುನಾಥ್, ಯಶವಂತ್, ಹೇಮಾವತಿ, ರಮ್ಯಾ, ಮೀನಾ, ವಡ್ಗಲ್, ಮಂಜುನಾಥ್, ನಟರಾಜ್, ಅನುಪಮಾ, ರೇಖಾ, ಭಾಗ್ಯಲಕ್ಷ್ಮೀ ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net