ವಿದ್ಯಾರ್ಥಿನಿಲಯಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಿ

19
Published on

ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಸಚ್ಛತೆ ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ್ ಎಚ್ಚರಿಸಿದರು.
ರಾಘವೇಂದ್ರ ನಗರದಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಕಲ್ಯಾಣಾಧಿಕಾರಿಗಳು, ಜಿಲ್ಲೆಯ ಎಲ್ಲ ನಿಲಯ ಮೇಲ್ವಿಚಾರಕರು, ಆಶ್ರಮಶಾಲೆ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಬೇಸಿಗೆ ಪ್ರಾರಂಭವಾಗುತ್ತಿದ್ದು, ಕುಡಿಯುವ ನೀರಿನ ಟ್ಯಾಂಕ್, ಸಂಪುಗಳನ್ನು ಶುಚಿತ್ವಗೊಳಿಸಬೇಕು. ಕಿಟಕಿ, ನಲ್ಲಿಗಳು, ಶೌಚಗೃಹದಲ್ಲಿ ಸಮಸ್ಯೆಗಳಿದ್ದರೆ ಸರಿಪಡಿಸಿಕೊಳ್ಳಬೇಕು. ಹಾಸ್ಟೆಲ್‌ಗಳಲ್ಲಿ ಮೆನು ಚಾರ್ಟ್ ಪ್ರಕಾರ ವಿದ್ಯಾರ್ಥಿಗಳಿಗೆ ಊಟ ಕೊಡಬೇಕು ಎಂದು ಹೇಳಿದರು.
ಅಡುಗೆಯವರು ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳಿಗೆ ಊಟ, ತಿಂಡಿ ಮಾಡಿಕೊಡಬೇಕು. ಸಮವಸ್ತ್ರ, ಹ್ಯಾಂಡ್‌ಗ್ಲೌಸ್, ಕ್ಯಾಪ್ ಹಾಕಬೇಕು. ಬಯೋಮೆಟ್ರಿಕ್ ಅನ್ನು ಬೆಳಗ್ಗೆ, ಸಂಜೆ ಎರಡು ಸಮಯದಲ್ಲಿಯೂ ಕಡ್ಡಾಯವಾಗಿ ಹಾಕಬೇಕು. ಜತೆಗೆ ನಿಲಯಪಾಲಕರು ಖುದ್ದು ಹಾಜರಿದ್ದು, ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಸ್ಪೋಕನ್ ಇಂಗ್ಲಿಷ್, ವ್ಯಕ್ತಿತ್ವ ವಿಕಸನ, ಕರಾಟೆ ತರಗತಿಗಳು ಕಡ್ಡಾಯವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಆಹಾರ ಗುತ್ತಿಗೆ ಪಡೆದಿರುವವರು ಕಳಪೆ ಆಹಾರ ಸಾಮಗ್ರಿ ಸರಬರಾಜು ಮಾಡಿದರೆ ತಿರಸ್ಕರಿಸುವುದರ ಜತೆಗೆ ಕಚೇರಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಇಷ್ಟೆಲ್ಲ ಎಚ್ಚರಿಕೆ ಸಲಹೆ ಕೊಟ್ಟಮೇಲೂ ಲೋಪದೋಷಗಳು ಕಂಡು ಬಂದರೆ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಕಲ್ಯಾಣಾಧಿಕಾರಿಗಳಾದ ಚಂದ್ರಕಲಾ, ವಿಶ್ವನಾಥ್, ಮೇಘ, ಸ್ವರ್ಣಲತಾ, ಶಶಿಕಲಾ, ಹರೀಶ್, ಸುಕನ್ಯ, ಸತೀಶ್, ಜಿಲ್ಲಾ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಎ.ಎಸ್. ದೀಪಕ್, ಮೇಲ್ವಿಚಾರಕಿ ಎಂ. ಛಾಯಾ, ಲೆಕ್ಕ ಅಧೀಕ್ಷಕರಾದ ನಿರಂಜನಮೂರ್ತಿ, ರಮ್ಯಾ, ಲೀಲಾ, ಪರಶುರಾಂ, ಯಶವಂತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net