

ಮೈಸೂರು: ವಾಲ್ಮೀಕಿ, ಆಶ್ರಮಶಾಲೆ ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎನ್.ಮುನಿರಾಜು ಅಧಿಕಾರಿಗಳಿಗೆ ಸೂಚಿಸಿದರು.
ಪಡುವಾರಹಳ್ಳಿಯ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಗುರುವಾರ ನಡೆದ ವಿದ್ಯಾರ್ಥಿ ನಿಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರಿನ ಸಂಪು ಮತ್ತು ಟ್ಯಾಂಕ್‌ಗಳನ್ನು ಶುಚಿಯಾಗಿಡಬೇಕು. ವಿದ್ಯಾರ್ಥಿನಿಯಲಯದ ಆವರಣ, ಅಡುಗೆ ಮನೆ, ದಾಸ್ತಾನು ಕೊಠಡಿ, ವಸತಿ ಕೊಠಡಿಗಳು, ಸ್ನಾನದ ಮನೆ ಮತ್ತು ಶೌಚಗೃಹಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಅನುಪಯುಕ್ತ ವಸ್ತುಗಳನ್ನು ಸರ್ಕಾರದ ನಿರ್ದೇಶನದಂತೆ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ವಿದ್ಯಾರ್ಥಿಗಳಿಗೆ ಒದಗಿಸಬೇಕಾದ ಎಲ್ಲ ಅಗತ್ಯ ಮೂಲ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ವಿತರಿಸಬೇಕು. ಆರೋಗ್ಯ ತಪಾಸಣೆ ಮಾಡಿಸಬೇಕು. ವಿದ್ಯಾರ್ಥಿನಿಲಯ ಅಥವಾ ಶಾಲೆಗಳಲ್ಲಿ ಹೆಚ್ಚುವರಿ ಸಾಮಗ್ರಿಗಳು ಲಭ್ಯವಿದ್ದಲ್ಲಿ ತಾಲೂಕು ಮಟ್ಟದಲ್ಲಿ ಅಗತ್ಯವಿರುವ ಕಡೆಗೆ ಒದಗಿಸಬೇಕು. ಈ ಸೂಚನೆ ಪಾಲನೆಯಲ್ಲಿ ಲೋಪಗಳು ಕಂಡು ಬಂದರೆ, ಆಯಾ ತಾಲೂಕು ಅಧಿಕಾರಿಗಳು ನಿಲಯ ಮೇಲ್ವಿಚಾರಕರು, ಮುಖ್ಯ ಶಿಕ್ಷಕರು ಜವಾಬ್ದಾರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಕಲ್ಯಾಣಾಧಿಕಾರಿಗಳಾದ ನಾರಾಯಣ ಸ್ವಾಮಿ, ಸಿದ್ದೇಗೌಡ, ಅಶೋಕ್, ಕೋಮಲಾ, ಬಸವರಾಜು, ಮೊಹಮ್ಮದ್ ಷಫೀರ್, ಕಚೇರಿ ಅಧೀಕ್ಷಕರಾದ ಹನುಮಂತರಾಯಪ್ಪ. ರಾಧಾ. ಆರಾಧ್ಯ, ಜ್ಯೂಲಿಯೇಟ್, ಚೇತನ್, ಲತಾ ಶಿವರಾಮ್, ಸರಸ್ವತಿ, ಆಶ್ರಮ ಶಾಲೆಗಳ ಮುಖ್ಯಶಿಕ್ಷಕರು, ನಿಲಯ ಪಾಲಕರುಗಳು, ಉಪಸ್ಥಿತರಿದ್ದರು.