

ಹಾಸನ: ವಿದ್ಯಾರ್ಥಿನಿಯರು ಆರೋಗ್ಯದ ಬಗ್ಗೆ ಕಾಳಜಿಹೊಂದಿ ಇತರರಿಗೆ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವ ಮೂಲಕ ಆರೋಗ್ಯಯುತ ಸಮಾಜ ಕಟ್ಟಲು ಮುಂದಾಗಬೇಕು ಎಂದು ರೋಟರಿ ಅಂತರಾಷ್ಟ್ರೀಯ ಜಿಲ್ಲೆಯ ಡಿಸ್ಟಿಕ್ ಗೌರ್ನರ್ ನಾಮಿನಿ ರೋ.ಪಾಲಾಕ್ಷ ಕರೆ ನೀಡಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಯುವ ರೆಡ್ ಕ್ರಾಸ್ ಮಹಿಳಾ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್ ಆಫ್ ಹಾಸನ್ ಮಿಡ್ ಟೌನ್ ಮತ್ತು ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ನ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ನಂತರದಲ್ಲಿ ದೇಶದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗಿದೆ ಎಂದ ಅವರು, ಇತ್ತೀಚೆಗೆ ಬದಲಾದ ನಮ್ಮ ಜೀವನ ಶೈಲಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದೇವೆ ಹಾಗೂ ಯುವ ಪೀಳಿಗೆ ಅತೀಯಾದ ಮೊಬೈಲ್ ಬಳಕೆಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಎಲ್ಲರೂ ಆರೋಗ್ಯದ ಬಗ್ಗೆ ಜಾಗೃತರಾಗಬೇಕು ಎಂದು ಕರೆ ನೀಡಿದರು.
ರೋಟರಿ ಅಂತರಾಷ್ಟ್ರೀಯ ಜಿಲ್ಲೆಯ ಅಸಿಸ್ಟೆಂಟ್ ಗೌರ್ನರ್ ಹಾಗೂ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕಿ ರೋ.ಡಾ.ಸೌಮ್ಯಮಣಿ ಮಾತನಾಡಿ, ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಹೆಣ್ಣು ಮಕ್ಕಳಲ್ಲಿ ಬದಲಾವಣೆಗಳಾಗುತ್ತಿದ್ದು, ಅದರ ಬಗ್ಗೆ ಅರಿವು ಮೂಡಿಸಿಕೊಂಡು ನಿಯಂತ್ರಣಕ್ಕೆ ತರುವಂತಹ ಕೆಲಸವನ್ನು ಮಾಡಬೇಕು. ನಮ್ಮಲ್ಲಿ ಏನೇ ಆರೋಗ್ಯದ ಸಮಸ್ಯೆಗಳು ಎದುರಾದರೂ ಪೌಷ್ಠಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸುವ ಮೂಲಕ ಹಾಗೂ ವ್ಯಾಯಾಮಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತ್ತೀಚೆಗೆ ಗರ್ಭ ಕೊರಳಿನ ಕ್ಯಾನ್ಸ್ಸರ್ ಹಾಗೂ ಸ್ತನ ಕ್ಯಾನ್ಸ್ಸರ್ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕೆ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ಕ್ಯಾನ್ಸ್ಸರ್ ಗಳನ್ನು ತಡೆಗಟ್ಟಬಹುದಾಗಿದೆ. ಈ ಬಗ್ಗೆ ಹೆಣ್ಣು ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ.ಕವಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರವದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಮಿಡ್ ಟೌನ್ ನ ಅಧ್ಯಕ್ಷೆ ರೋ.ಮಮತಾ ಪಾಟೀಲ್, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ನ ಅಧ್ಯಕ್ಷ ರೋ.ನಾಗೇಶ್, ಕಾರ್ಯಕ್ರಮಾಧಿಕಾರಿ ರೋ.ಕೆ.ಸಿ.ನವೀನ್, ಮಿಡ್ ಟೌನ್ ಮಾಜಿ ಅಧ್ಯಕ್ಷ ರೋ.ರಮಾನಂದ, ರೋ.ಪ್ರದೀಪ್ ಕುಮಾರ್, ಶ್ರೀಧರ್ಮಸ್ಥಳ ಮಂಜುನಾಥ ಆರ್ಯುವೇದ ಆಸ್ಪತ್ರೆಯ ವೈದ್ಯೆ ಡಾ.ಗಾಯತ್ರಿ ಭಟ್, ಕೇಶವ ನೇತ್ರಾಲಯದ ಡಾ.ನರೇಂದ್ರ, ಕಾಲೇಜಿನ ಯುವ ರೆಡ್ ಕ್ರಾಸ್ ಮಹಿಳಾ ಘಟಕದ ಸಂಚಾಲಕ ಡಾ.ಎಚ್.ಕೆ.ವೆಂಕಟೇಶ್, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಯೋಗೇಶ್, ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಹಾಗೂ ಇತರರು ಇದ್ದರು.
ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗಿ:
ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಕಾಲೇಜಿನ ಸುಮಾರು 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಥೈರಾಯಿಡ್, ರಕ್ತದ ಗುಂಪು ಪತ್ತೆ, ನೇತ್ರ ತಪಾಸಣೆ, ದಂತ ತಪಾಸಣೆ ಮಾಡಿಸಿದರು. 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು. ಈ ಸಂದರ್ಭದಲ್ಲಿ ಉಚಿತವಾಗಿ ವಿದ್ಯಾರ್ಥಿನಿಯರಿಗೆ ಔಷಧವನ್ನು ವಿತರಿಸಲಾಯಿತು. ಶಿಬಿರದಲ್ಲಿ ಹಾಸನಾಂಬ ದಂತ ವೈದ್ಯಕೀಯ ಕಾಲೇಜು, ಶ್ರೀಧರ್ಮಸ್ಥಳ ಆಯುರ್ವೇದ ಆಸ್ಪತ್ರೆ, ಕೇಶವ ನೇತ್ರಾಲಯ, ಥೈರೋ ಕೇರ್, ಜೀವ ಸಂಜಿವೀನಿ ರಕ್ತ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ತಂಡ ಭಾಗವಹಿಸಿ ಆರೋಗ್ಯ ಶಿಬಿರವನ್ನು ಯಶಸ್ವಿಗೊಳಿಸಿದರು.