

ಚಿತ್ರದುರ್ಗ: ಉಡುಪಿಯ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ಯುವತಿಯರು ಶೌಚಗೃಹ ಬಳಸುವ ವಿಡಿಯೋ ಮಾಡಿರುವ ಮೂವರು ವಿದ್ಯಾರ್ಥಿನಿಯರು ಅದನ್ನು ತಮ್ಮದೇ ಕೋಮಿನವರೊಂದಿಗೆ ಹಂಚಿ ಕೊಂಡಿದ್ದಾರೆ. ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲೂ ಶೇರ್ ಮಾಡಿದ್ದಾರೆ. ಆದರೆ, ಗೃಹ ಸಚಿವರು ಪ್ರಕರಣ ದಾರಿ ತಪ್ಪಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಇದೊಂದು ಜಾಲವಾಗಿರುವುದು ಆತಂಕಕಾರಿ ಘಟನೆ. ಅಲ್ಲದೆ, ಈ ರೀತಿ ಮಾಡುವುದು ಅಕ್ಷಮ್ಯ ಅಪರಾಧ. ಹೇಯ ಕೃತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ಸತ್ಯಾಸತ್ಯತೆ ಹೊರಬರಲು ತನಿಖೆ ಕೈಗೊಳ್ಳಬೇಕು. ಈ ಷಡ್ಯಂತ್ರ ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಇಂತಹ ಘಟನೆ ರಾಜ್ಯದ ಯಾವುದೇ ಕಾಲೇಜಿನಲ್ಲಿ ಮರುಕಳಿಸದಂತೆ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಮಟ್ಟದ ವಿಶೇಷ ತಂಡ ರಚಿಸಬೇಕು ಎಂದು ಕೋರಿದರು.
ಪದಾಧಿಕಾರಿಗಳಾದ ಎಂ.ಎಸ್.ವೀರೇಂದ್ರ, ದೀಪಕ್ ರಾಜ್, ಜಯಂತ್, ಪ್ರಮೋದ್, ರವಿಕುಮಾರ್, ಬಾಲಾಜಿ, ರಘು ಇತರರಿದ್ದರು.