

ಬಸವಕಲ್ಯಾಣ: ಎನ್‌ಎಸ್‌ಎಸ್ ಸಾಮಾಜಿಕ ಸೇವೆ ಮಾಡುವುದನ್ನು ಕಲಿಸುವುದರ ಜತೆಗೆ ಭ್ರಾತೃತ್ವ ಭಾವವನ್ನು ಬೆಳೆಸುತ್ತದೆ ಎಂದು ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಹೇಳಿದರು.
ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯ ಮತ್ತು ದೊಡ್ಡಪ್ಪ ಅಪ್ಪ ಬಿಸಿಎ ಮಹಾವಿದ್ಯಾಲಯ ಹಾಗೂ ಬೀದರ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು. ಆರೋಗ್ಯಪೂರ್ಣ ಜೀವನಕ್ಕೆ ಬೇಕಿರುವ ಪರಿಸರ ಸಂರಕ್ಷಣೆ ಅವಶ್ಯಕ. ಕೆರೆ ಹಳ್ಳಗಳನ್ನು ಶುದ್ಧೀಕರಿಸುವುದು ಪ್ರತಿ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಮನೆ ಗೆದ್ದು ಮಾರು ಗೆದ್ದೆ ಎನ್ನುವಂತೆ ಮೊದಲು ಕಾಲೇಜಿನ ಪರಿಸರದಲ್ಲಿ ಸ್ವಚ್ಛತ್ನೆ ಕಾಪಾಡಿಕೊಂಡು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಿದರು.
ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ.ಅಶೋಕಕುಮಾರ ವಣಿಗೇರಿ ಮಾತನಾಡಿ, ಓದಿನ ಜತೆಗೆ ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನದ ಅರಿವು ಅವಶ್ಯಕ. ಮಾತು ಕಡಿಮೆ, ಕೆಲಸದಲ್ಲಿ ಶ್ರದ್ಧೆ ಬೆಳೆಸಿಕೊಂಡರೆ ಯಶಸ್ಸು ಕಾಣಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಎಸ್‌ಕೆಬಿ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ವಾರ್ಷಿಕ ಶಿಬಿರದ ಮೂಲಕ ನಿಮ್ಮಲ್ಲಿ ಸಂಸ್ಕಾರಯುತ ಬದಲಾವಣೆಗಳಾಗಬೇಕು. ಶಿಬಿರದಲ್ಲಿ ವಿಷಯ ಪರಿಣಿತಿ ಪಡೆದ ವ್ಯಕ್ತಿಗಳನ್ನು ಕರೆಸಿ ನಿಮಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್, ಎನ್‌ಎಸ್‌ಎಸ್ ಅಧಿಕಾರಿ ಸುರೇಶ ಎಚ್.ಆರ್., ಮಾದೇವ ಡಿ, ದೊಡ್ಡಪ್ಪ ಅಪ್ಪ ಬಿಸಿಎ ಕಾಲೇಜಿನ ಪ್ರಾಚಾರ್ಯ ಲೋಕೇಶ್ ಮನ್ನಾಳೆ, ಶಾಂತಕುಮಾರ ಭುರೆ, ಡಾ.ರಮೇಶ ಕೆ.ಬಿ., ಪ್ರೊ.ಲಕ್ಷ್ಮೀ ಭಂಕೂರ, ಗ್ರಂಥಪಾಲಕ ಸೂರ್ಯಕಾಂತ ನಾಸೆ, ಕಲ್ಯಾಣಪ್ಪ ನವದಗಿ, ದೀಪಕ ಕಾಡದಿ, ಭಾರತಿ ಮಠಪತಿ, ವಿನಾಯಕ ಮುಳ್ಳೂರು, ಉಲ್ಲಾಸ ಬೊಕ್ಕೆ, ಆನಂದ ಬಿರಾದಾರ ಇದ್ದರು.
ಪ್ರೊ.ವಿಠೋಬಾ ಡೋಣ್ಣೆಗೌಡರ ಸ್ವಾಗತಿಸಿದರು. ಕು.ನೇತ್ರಾ ಕಳಮಾಸೆ ನಿರೂಪಣೆ ಮಾಡಿದರು. ಕು.ಮೀನಾಕ್ಷಿ ಮತ್ತು ಕು.ಅಂಬಿಕಾ ಎನ್‌ಎಸ್‌ಎಸ್ ಗೀತೆ ಹಾಡಿದರು.