

ಹೊಳೆನರಸೀಪುರ: ಗ್ರಾಮೀಣ ಭಾಗದ ಶೈಕ್ಷಣಿಕ ಮಟ್ಟ ಸುಧಾರಿಸಿ, ಉತ್ತಮ ಸೌಲಭ್ಯಗಳನ್ನು ನೀಡುವುದರಿಂದ ವಿದ್ಯಾರ್ಥಿಗಳೇ ಭವಿಷ್ಯದ ಆಸ್ತಿಗಳಾಗಿ ಹೊರ ಹೊಮ್ಮುತ್ತಾರೆ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ಹಳ್ಳಿಮೈಸೂರು ಹೋಬಳಿ ವ್ಯಾಪ್ತಿಯ ನಿಡುವಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಶೈಕ್ಷಣಿಕ ವ್ಯವಸ್ಥೆ ಉತ್ತಮವಾಗಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಶ್ರಮ ವಹಿಸಬೇಕಿದೆ. ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನೀಡಬೇಕಾದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ ಹಾಗೂ ಉತ್ತಮ ವಾತಾವರಣ ಅವಶ್ಯಕ. ಗ್ರಾಮೀಣ ವಿದ್ಯಾರ್ಥಿಗಳು ಸಾಮಾಜಿಕ, ನೈತಿಕ ಮಟ್ಟದಲ್ಲಿ ಹೆಚ್ಚು ಪ್ರಬುದ್ಧರಾಗಿದ್ದಾರೆ. ಬುದ್ಧಿಯಲ್ಲಿ ಪಟ್ಟಣದ ವಿದ್ಯಾರ್ಥಿಗಳಿಗಿಂತಲೂ ಮುಂದಿರುತ್ತಾರೆ. ಆದರೆ ಸರಿಯಾದ ವ್ಯವಸ್ಥೆಯನ್ನು ಒದಗಿಸದೆ ಶೈಕ್ಷಣಿಕ ಪ್ರಗತಿಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ಮುಂದುವರಿಯುತ್ತಿದೆ. ಸರ್ಕಾರಿ ಶಾಲೆಗಳಿದ್ದರೂ ಖಾಸಗಿ ಶಾಲೆಗಳಿಗೆ ಬಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡಲು ಕಳುಹಿಸುತ್ತಾರೆ. ಶಾಲೆಗಳ ಶಿಕ್ಷಣ ಮಟ್ಟ ಸುಧಾರಿಸಲು ಶಿಕ್ಷಕ ವರ್ಗ ತಮ್ಮ ಬುದ್ಧಿಶಕ್ತಿ ಬಳಸಬೇಕಾಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಭಿನ್ನವಾಗಿಲ್ಲ ಎಂಬ ಅಭಿಪ್ರಾಯ ಪಾಲಕರಲ್ಲಿ ಬರುವಂತಹ ವಾತಾವರಣವನ್ನು ಸರ್ಕಾರಿ ಶಾಲೆಯ ಶಿಕ್ಷಕರು ಸೃಷ್ಟಿಸಬೇಕಿದೆ. ಹಾಗೆಯೇ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಹಳ್ಳಿ ಮೈಸೂರು ಹೋಬಳಿಯ ಕುರಿ ಕಾವಲು, ಬಡಕ್ಯಾತನಹಳ್ಳಿ, ಸೋಮನಹಳ್ಳಿ, ಗುಡ್ಡೇನಹಳ್ಳಿ, ಜಾಕನಹಳ್ಳಿ, ಹಾಡ್ಯ ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಕಾಮಗಾರಿಗೆ ಚಾಲನೆ ನೀಡಿದರು.
ನಿಡುವಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ 32.8 ಲಕ್ಷ ರೂ. ವೆಚ್ಚದಲ್ಲಿ ಎರಡು ಹೆಚ್ಚುವರಿ ಶಾಲಾ ಕೊಠಡಿ, ಜೋಡಿಗುಬ್ಬಿ, ಮಂಗಳವಾಡಿ, ಜಾಕನಹಳ್ಳಿ ಗ್ರಾಮಗಳಿಗೆ ತಲಾ ಒಂದು ಹೆಚ್ಚುವರಿ ಶಾಲಾ ಕೊಠಡಿಗಳಿಗೆ 74.5 ಲಕ್ಷ ರೂ. ಹಾಗೂ 10 ಲಕ್ಷ ರೂ. ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಶಾಲಾ ಕಟ್ಟಡ ನಿರ್ಮಾಣದ ಹಂತದಲ್ಲಿ ಶಾಲೆಯ ಮುಖ್ಯಶಿಕ್ಷಕರು ಹೆಚ್ಚು ಗಮನಹರಿಸಿ ಗುಣಮಟ್ಟದ ಕಟ್ಟಡ ನಿರ್ಮಿಸಿಕೊಳ್ಳಬೇಕು. ಈ ಬಗ್ಗೆ ನೋಟಿಸ್ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸೂಚಿಸಿದ ಶಾಸಕರು, ಕಳಪೆ ಕಾಮಗಾರಿ ಕಂಡು ಬಂದರೆ ಶಿಕ್ಷಕರ ಸಂಬಳದಲ್ಲಿ ದುರಸ್ತಿ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾದೇವಪ್ಪ, ಗ್ರಾಪಂ ಸದಸ್ಯ ಕವಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್, ಮಾಜಿ ತಾಪಂ ಅಧ್ಯಕ್ಷ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಮುಖ್ಯಶಿಕ್ಷಕಿ ಜಬೀನಬೇಗಮ್ ಇತರರು ಇದ್ದರು.